
ಬೆಂಗಳೂರು, ಜು.9- ಬಿಬಿಎಂಪಿ ವಿಶೇಷ ಸಭೆಯಲ್ಲೂ ಕುದುರೆ ವ್ಯಾಪಾರ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆದು ಗದ್ದಲ-ಗೌಜಲು ಉಂಟಾಗಿ ಸಭೆಯನ್ನು ಮುಂದೂಡಲಾಯಿತು.
ಟಿಡಿಆರ್ ಅವ್ಯವಹಾರ ಕುರಿತ ಚುಕ್ಕೆ ಗುರುತಿನ ವಿಶೇಷ ಪಾಲಿಕೆ ಸಭೆಯನ್ನು ಇಂದು ಕರೆಯಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಬಿಜೆಪಿಯವರು ನಮ್ಮ ಪಕ್ಷದ ಶಾಸಕರನ್ನು ಕುದುರೆ ವ್ಯಾಪಾರ ಮಾಡಿ ಸೆಳೆದಿದ್ದಾರೆ ಎಂದು ಆರೋಪಿಸಿ ಡೌನ್ ಡೌನ್ ಬಿಜೆಪಿ ಎಂದು ಕೂಗಿ ಸದನದ ಬಾವಿಗಿಳಿದು ಪ್ರತಿಭಟನೆ ಪ್ರಾರಂಭಿಸಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಕೂಡ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗತೊಡಗಿದರು.ಇದರಿಂದ ಯಾರು ಏನು ಮಾತನಾಡುತ್ತಿದ್ದಾರೆ, ಏನು ಹೇಳುತ್ತಿದ್ದಾರೆ ಎಂದು ಗೊತ್ತಾಗದೆ ಗೊಂದಲಮಯವಾಯಿತು.
ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಟಿಡಿಆರ್ ಹಗರಣ ಎಲ್ಲಿ ಬಯಲಿಗೆ ಬರುತ್ತದೋ ಎಂಬ ಕಾರಣಕ್ಕೆ ಶಾಸಕರ ಕುದುರೆ ವ್ಯಾಪಾರ ಮುಂದಿಟ್ಟುಕೊಂಡು ಆಡಳಿತ ಪಕ್ಷದವರು ಗದ್ದಲ ಎಬ್ಬಿಸಿ ಸಭೆಯನ್ನು ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಡಿಮೆ ಸಂಖ್ಯೆ ಹೊಂದಿದವರಿಗೆ ಆಡಳಿತ ಪಕ್ಷದ ನಾಯಕ ಸ್ಥಾನ ಕೊಡಲು ಸಾಧ್ಯವಿಲ್ಲ. ಕೂಡಲೇ ಅಬ್ದುಲ್ ವಾಜಿದ್ ಅವರನ್ನು ಆ ಸ್ಥಾನದಿಂದ ವಜಾ ಮಾಡಬೇಕೆಂದು ಪದ್ಮನಾಭರೆಡ್ಡಿ ಒತ್ತಾಯಿಸಿದರು.
ಇದರ ನಡುವೆಯೇ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗುವುದನ್ನು ಮುಂದುವರಿಸಿದರು.ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಕೂಡ ಘೋಷಣೆ ಕೂಗಲಾರಂಭಿಸಿದ್ದರಿಂದ ಸಭೆ ಗೌಜಲುಮಯವಾಯಿತು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಮೇಯರ್ ಗಂಗಾಂಬಿಕೆ ಸಭೆಯನ್ನು ಮುಂದೂಡಿದರು.