ಬೆಂಗಳೂರು,ಜು.9- ಆಪರೇಷನ್ ಕಮಲಕ್ಕೆ ಒಳಗಾಗುವುದನ್ನು ತಪ್ಪಿಸಲು ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ಖಾಸಗಿ ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದು, ಇನ್ನೂ ಎರಡು ದಿನಗಳ ಕಾಲ ಅಲ್ಲೇ ಉಳಿಯಲಿದ್ದಾರೆ.
ಜೆಡಿಎಸ್ನ ಶಾಸಕರಾದ ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಉಳಿದ ಶಾಸಕರ್ಯಾರು ಆ ರೀತಿಯ ನಿರ್ಧಾರ ಕೈಗೊಳ್ಳದಂತೆ ಮತ್ತು ಶಾಸಕರಲ್ಲಿ ಒಗ್ಗಟ್ಟು ಕಾಪಾಡಿಕೊಳ್ಳುವ ಉದ್ದೇಶದಿಂದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ನಿನ್ನೆ ಸಂಜೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಭೆ ನಡೆಸಿದ ನಂತರ ಜೆಡಿಎಸ್ ಶಾಸಕರು ರೆಸಾಟ್ಗೆ ತೆರಳಿದ್ದಾರೆ. ಮತ್ತೆ ಜೆಡಿಎಸ್ನ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಹಬ್ಬಿದ ಹಿನ್ನೆಲೆಯಲ್ಲಿ ಶಾಸಕರನ್ನು ಒಂದೆಡೆ ಸೇರಿಸಲಾಗಿದೆ.
ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಸಂಕಷ್ಟವನ್ನು ಪರಿಹರಿಸಲು ಹರಸಾಹಸಪಡುತ್ತಿರುವ ಜೆಡಿಎಸ್ ವರಿಷ್ಠರು ಉಳಿದಿರುವ ಶಾಸಕರಾರೂ ಆಪರೇಷನ್ ಕಮಲಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಿದ್ದಾರೆ.
ಕಳೆದ ಎರಡು ದಿನಗಳಿಂದಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿರಂತರವಾಗಿ ಸಭೆಗಳನ್ನು ನಡೆಸಿ ಸರ್ಕಾರ ಉಳಿಸಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆ ಸಮಾಲೋಚನೆಯನ್ನು ನಡೆಸುತ್ತಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆಯಿಂದ ಎದುರಾಗಿರುವ ಬಿಕ್ಕಟ್ಟನ್ನು ಪರಿಹರಿಸಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಹರಸಾಹಸ ಮಾಡುತ್ತಿದ್ದು, ಜೆಡಿಎಸ್ ಶಾಸಕರು ಒಗ್ಗಟ್ಟಿನಿಂದ ಇರುವಂತೆ ಮನವಿ ಮಾಡಿಕೊಂಡಿದ್ದು, ಎಲ್ಲರನ್ನು ಒಂದೆಡೆ ಸೇರಿಸಿದ್ದಾರೆ.
ಸರ್ಕಾರ ಉಳಿಸಿಕೊಳ್ಳುವ ಅವಕಾಶ ಇನ್ನು ಇದೆ ಎಂದು ಶಾಸಕರಿಗೆ ಮುಖ್ಯಮಂತ್ರಿ ಭರವಸೆ ನೀಡಿದ್ದು, ಯಾರೂ ಕೂಡ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಕೊನೆ ಗಳಿಗೆಯವರೆಗೂ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕೆಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ. ಅದರಂತೆ ಎಲ್ಲ ಶಾಸಕರು ಇನ್ನು ಎರಡು ದಿನಗಳ ಕಾಲ ರೆಸಾರ್ಟ್ನಲ್ಲೇ ಉಳಿದುಕೊಳ್ಳಲಿದ್ದಾರೆ.