ಬೆಂಗಳೂರು,ಜು.9- ದೀಢಿರನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಿರುವ ಮಹಾಲಕ್ಷ್ಮಿ ಲೇಔಟ್ನ ಗೋಪಾಲಯ್ಯ ಬಿಜೆಪಿ ಸೇರ್ಪಡೆಗೆ ಪಕ್ಷದ ವಲಯದಲ್ಲೇ ಭಾರೀ ವಿರೋಧ ವ್ಯಕ್ತವಾಗಿದೆ.
ಅದರಲ್ಲೂ ಮಹಾಲಕ್ಷ್ಮಿಲೇಔಟ್ನ ಪ್ರಮುಖರಾದ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಬಿಬಿಎಂಪಿ ಮಾಜಿ ಉಪಮೇಯರ್ ಎಸ್.ಹರೀಶ್, ಬಿಬಿಎಂಪಿ ಮಾಜಿ ಸದಸ್ಯ ಎಂ.ನಾಗರಾಜ್, ಮುಖಂಡರಾದ ಸಿ.ರಾಜಣ್ಣ, ಡಾ.ಪ್ರಸನ್ನ ಸೇರಿದಂತೆ ಅನೇಕರು ಗೋಪಾಲಯ್ಯ ಸೇರ್ಪಡೆಗೆ ಅಸಮಾಧಾನ ಹೊರಹಾಕಿದ್ದಾರೆ.
ಈ ಸಂಬಂಧ ಇಂದು ಈ ಎಲ್ಲ ಮುಖಂಡರು ಸಭೆ ಸೇರಿ ಮುಂದಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಗೋಪಾಲಯ್ಯ ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳುವ ಬಗ್ಗೆ ಪಕ್ಷದ ವರಿಷ್ಠರು ಮತ್ತೊಮ್ಮೆ ಮರುಚಿಂತನೆ ನಡೆಸಬೇಕೆಂದು ಮನವಿ ಮಾಡಲು ತೀರ್ಮಾನಿಸಿದ್ದಾರೆ.
ಲೋಕಸಭೆ, ವಿಧಾನಸಭೆ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಮಹಾಲಕ್ಷ್ಮಿಲೇಔಟ್ನ ಎಲ್ಲ ಬಿಜೆಪಿ ಪ್ರಮುಖರು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ದ ಹೋರಾಟ ನಡೆಸಿದ್ದೇವೆ.
ಈಗ ಏಕಾಏಕಿ ಗೋಪಾಲಯ್ಯ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಪಕ್ಷಕ್ಕೆ ದುಡಿದ ನಾವುಗಳು ಏನು ಮಾಡಬೇಕು. ಕಡೆ ಪಕ್ಷ ಸ್ಥಳೀಯರ ಅಭಿಪ್ರಾಯವನ್ನು ಪಡೆಯದೇ ಸೇರ್ಪಡೆ ಮಾಡಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಸಾಕಷ್ಟು ವೈಮನಸ್ಸಿದೆ. ಚುನಾವಣಾ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಹಾವು-ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದೇವೆ. ಈಗ ಏಕಾಏಕಿ ಕಾರ್ಯಕರ್ತರು ಕೈಜೋಡಿಸಬೇಕೆಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಗೋಪಾಲಯ್ಯ ನೀಡಿರುವ ರಾಜೀನಾಮೆಯನ್ನು ವಿಧಾನಸಭೆ ಸ್ಪೀಕರ್ ರಮೇಶ್ಕುಮಾರ್ ಅಂಗೀಕರಿಸಿ ಮಹಾಲಕ್ಷ್ಮಿ ಲೇಔಟ್ನಲ್ಲಿ ಉಪಚುನಾವಣೆ ಎದುರಾದರೆ ನಾವು ಅವರ ಪರವಾಗಿ ಪ್ರಚಾರ ನಡೆಸಬೇಕೇ? ಈವರೆಗೂ ನಮ್ಮ ವಿರುದ್ದ ಹೋರಾಟ ನಡೆಸಿದವರ ಪರ ಪ್ರಚಾರ ನಡೆಸಬೇಕೇ? ಕ್ಷೇತ್ರದಲ್ಲಿ ಮತ ಕೇಳುವುದಾದರೂ ಹೇಗೆ ಎಂದು ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ಸದ್ಯದಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ , ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮುಖಂಡರಾದ ಆರ್.ಅಶೋಕ್ ಮತ್ತಿತರರನ್ನು ಭೇಟಿಯಾಗಿ ದೂರು ನೀಡುವ ಬಗ್ಗೆ ತೀರ್ಮಾನಿಸಲಾಗಿದೆ.