ಸಿಎಲ್‍ಪಿ ಸಭೆಗೆ ಗೈರು: ಶಾಸಕ ಸುಧಾಕರ್, ತುಕಾರಾಂಗೆ ಜ್ವರವಂತೆ

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆ ಇಂದು ವಿಧಾನಸೌಧದಲ್ಲಿ ನಡೆಯುತ್ತಿದ್ದು, ಕೆಲ ಶಾಸಕರು ಸಭೆಗೆ ಗೈರಾಗಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ಸಂಡೂರು ಶಾಸಕ ತುಕಾರಾಂ ಅವರು ಸಭೆಗೆ ಗೈರಾಗಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಕಾರಣ ನೀಡಿದ್ದಾರೆ. ನಮಗೆ ವೈರಲ್ ಜ್ವರ ಇದೆ. ಹೀಗಾಗಿ ಸಭೆಗೆ ಹಾಜರಾಗುತ್ತಿಲ್ಲ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇತ್ತ ಖಾನಾಪುರ ಅಂಜಲಿ ನಿಂಬಾಳ್ಕರ್ ಕೂಡ ಸಭೆಗೆ ಗೈರಾಗಿದ್ದಾರೆ. ಇದೀಗ ಇವರ ಈ ನಡೆ ತೀವ್ರ ಕುತೂಹಲ ಮೂಡಿಸಿದೆ. ಯಾಕಂದ್ರೆ ಈ ಇವರು ಸಭೆಗೆ ಹಾಜರಾಗುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಹೀಗಾಗಿ ಇವರು ಇಂದು ರಾಜೀನಾಮೆ ನೀಡಬಹುದು ಎಂದು ಹೇಳಲಾಗುತ್ತಿದೆ.

ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರು ಅನಾರೋಗ್ಯದ ಕಾರಣ ಗೈರು ಎಂದು ಪತ್ರ ಬರೆದು ತಮ್ಮ ಬೆಂಬಲಿಗನ ಮೂಲಕ ಪತ್ರ ಕಳುಹಿಸಿದ್ದಾರೆ.

ರಾಜೀನಾಮೆ ಕೊಟ್ಟವರು ಹಾಗೂ ರೋಶನ್ ಬೇಗ್ ರನ್ನ ಹೊರತುಪಡಿಸಿ ಅನುಮತಿ ಪಡೆದವರು ಹಾಗೂ ಮಾಹಿತಿ ನೀಡದವರು ಸೇರಿ ಒಟ್ಟು 8 ಮಂದಿ ಶಾಸಕರು ಸಭೆಗೆ ಗೈರಾಗಿದ್ದಾರೆ.

ನಾಗೇಂದ್ರ ತಡವಾಗಿ ಬರುವುದಾಗಿ ಸಿದ್ದರಾಮಯ್ಯಗೆ ಕರೆ ಮಾಡಿ ತಿಳಿಸಿದ್ದಾರೆ. ಈಗಾಗಲೇ ಸಮ್ಮಿಶ್ರ ಸರ್ಕಾರದ 15 ಮಂದಿ ರಾಜೀನಾಮೆ ನೀಡಿದ್ದು, ಇಂದು ಮತ್ತಷ್ಟು ಶಾಸಕರು ರಾಜೀನಾಮೆ ನಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಕಾಂಗ್ರೆಸ್ ನಿಂದ ಸಿಎಲ್‍ಪಿ ಸಭೆ ಕರೆಯಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್, ಶಾಸಕಾಂಗ ಸಭೆ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ