![garbage](http://kannada.vartamitra.com/wp-content/uploads/2019/07/garbage-508x381.jpg)
ಲಂಡನ್, ಜು.8– ವಿಶ್ವದ ಮಹಾಶಕ್ತಿಶಾಲಿ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ಅಮೆರಿಕಕ್ಕೆ ಕಸ ತ್ಯಾಜ್ಯಗಳ ರಾಶಿಯಲ್ಲೂ ಅಗ್ರಸ್ಥಾನದ ಕುಖ್ಯಾತಿ ಲಭಿಸಿದೆ.
ಅಚ್ಚರಿಯ ಸಂಗತಿ ಎಂದರೆ ವಿಶ್ವದ ಜನಸಂಖ್ಯೆಯಲ್ಲಿ ಅಮೆರಿಕ ಶೇ.4ರಷ್ಟು ಪಾಲು ಹೊಂದಿದ್ದರೂ ಈ ದೇಶ ಉತ್ಪಾದಿಸುವ ಕಸ ಜನಸಂಖ್ಯೆಗೂ ಶೇ.3ರಷ್ಟು ಅಧಿಕ. ಅಂದರೆ ಶೇ.12ರಷ್ಟು ಭಾರೀ ಪ್ರಮಾಣದ ಕಸವನ್ನು ವಿಶ್ವದ ದೊಡ್ಡಣ್ಣ ತನ್ನ ಒಡಲಲ್ಲಿಟ್ಟುಕೊಂಡಿದೆ.
ಅಮೆರಿಕದಲ್ಲಿ ಉತ್ಪಾದನೆಯಾಗುವ ಕಸವೂ ಅತ್ಯಧಿಕ ಜನಸಂಖ್ಯೆ ಹೊಂದಿರುವ ಚೀನಾ ಮತ್ತು ಭಾರತಕ್ಕಿಂತಲೂ ಅತ್ಯಧಿಕ ಎಂಬುದು ಮತ್ತೊಂದು ಗಮನಾರ್ಹ ಸಂಗತಿ.
ಅಮೆರಿಕ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದರೂ ಸಹ ತನ್ನ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಭಾರೀ ಪ್ರಮಾಣದ ಕಸ-ತ್ಯಾಜ್ಯಗಳನ್ನು ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜತೆಗೆ ತ್ಯಾಜ್ಯ ಮರು ಬಳಕೆಯಲ್ಲೂ ಅಮೆರಿಕ ಹಿಂದೆ ಬಿದ್ದಿದೆ.
ಇಂಗ್ಲೆಂಡ್ ಮೂಲದ ಸಂಸ್ಥೆಯೊಂದು ಬಿಡುಗಡೆ ಮಾಡಿರುವ ವರದಿಯೊಂದರಲ್ಲಿ ಅಮೆರಿಕ ಕಸ, ತ್ಯಾಜ್ಯಗಳ ರಾಜನಾಗಿದೆ.
ಐರೋಪ್ಯ ದೇಶಗಳಲ್ಲಿ ಜರ್ಮನಿ ಅತಿ ಹೆಚ್ಚು ಕಸ ಉತ್ಪಾದಿಸುತ್ತದೆಯಾದರೂ ಅಲ್ಲಿನ ಅತ್ಯಾಧುನಿಕ ತಂತ್ರಜ್ಞಾನದಿಂದ ಶೇ.68ರಷ್ಟು ಕಸ ಪುನರ್ಬಳಕೆಯಾಗುತ್ತಿದೆ.
ಆದರೆ, ಅಮೆರಿಕ ವಿಶ್ವದ ಶಕ್ತಿಶಾಲಿ ದೇಶವಾಗಿದ್ದರೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದರೂ ಇಲ್ಲಿ ಮರುಬಳಕೆಯಾಗುತ್ತಿರುವ ಕಸದ ಪ್ರಮಾಣ ಕೇವಲ ಶೇ.35.
ಚೀನಾ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದರೂ ಅತ್ಯಂತ ವಿವೇಚನೆಯಿಂದ ಕಸ ವಿಲೇವಾರಿ ಮತ್ತು ಪುನರ್ಬಳಕೆ ಮಾಡುತ್ತಿದೆ.
ಭಾರತವೂ ಸಹ ಜಾಗೃತಿ ಕಾರ್ಯಕ್ರಮದ ಮೂಲಕ ತ್ಯಾಜ್ಯಗಳ ವಿಲೇವಾರಿ ಮತ್ತು ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುತ್ತಿದೆ.
ಆದರೆ, ಅಮೆರಿಕ ಈ ವಿಚಾರದಲ್ಲಿ ಹಿಂದೆ ಬಿದ್ದಿರುವುದು ಆತಂಕಕಾರಿ ಸಂಗತಿ ಎಂದು ವರದಿಯಲ್ಲಿ ತಿಳಿಸಲಾಗಿದೆ.