ಸರ್ಕಾರವನ್ನು ಉಳಿಸಿಕೊಳ್ಳಲು ಶತಪ್ರಯತ್ನಗಳನ್ನು ನಡೆಸುತ್ತಿರುವ ಮೈತ್ರಿ ಪಕ್ಷದ ನಾಯಕರು

ಬೆಂಗಳೂರು,ಜು.9- ಅತೃಪ್ತ ಶಾಸಕರಿಂದ ಎದುರಾಗಿರುವ ಸಂಕಷ್ಟವನ್ನು ಪರಿಹರಿಸಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಜೆಡಿಎಸ್ ರಾಜೀನಾಮೆ ನೀಡುವ ತಮ್ಮ ಪಕ್ಷದ ಮೂವರು ಶಾಸಕರ ವಿರುದ್ದ ವಿಧಾನಸಭಾಧ್ಯಕ್ಷರಿಗೆ ದೂರು ನೀಡಲು ಸಿದ್ದತೆ ನಡೆಸಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರ ವಿರುದ್ದ ಸಭಾಧ್ಯಕ್ಷರಿಗೆ ಕಾಂಗ್ರೆಸ್ ದೂರು ನೀಡಿದರೆ ಜೆಡಿಎಸ್ ಕೂಡ ರಾಜೀನಾಮೆ ನೀಡಿರುವ ತಮ್ಮ ಶಾಸಕರ ವಿರುದ್ದ ದೂರು ನೀಡಲಿದೆ.

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರು ಶತಪ್ರಯತ್ನಗಳನ್ನು ನಡೆಸುತ್ತಿದ್ದು, ಕಾನೂನು ಹೋರಾಟಕ್ಕೆ ಮುಂದಾಗಿವೆ. ಕಾನೂನು ಹೋರಾಟದ ವಿಚಾರದಲ್ಲಿ ಉಭಯ ಪಕ್ಷಗಳು ಸಮಾನ ಹೋರಾಟವನ್ನು ಅತೃಪ್ತ ಶಾಸಕರ ವಿರುದ್ದ ಮಾಡಲು ತೀರ್ಮಾನಿಸಿವೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್, ಗೋಪಾಲಯ್ಯ ಹಾಗೂ ನಾರಾಯಣಗೌಡ ಅವರ ವಿರುದ್ದ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅತೃಪ್ತ ಶಾಸಕರ ವಿಚಾರದಲ್ಲಿ ಕಾಂಗ್ರೆಸ್ ಅನುಸರಿಸುವ ಮಾರ್ಗವನ್ನೇ ಜೆಡಿಎಸ್ ಅನುಸರಿಸಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜೀನಾಮೆ ನೀಡಿರುವ ಶಾಸಕರ ವಿರುದ್ಧದ ಕಾನೂನು ಹೋರಾಟದ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಈಗಾಗಲೇ ಉಭಯ ಪಕ್ಷಗಳ ನಾಯಕರು ಪಡೆದುಕೊಂಡಿದ್ದಾರೆ.

ಈಗಾಗಲೇ ಉಭಯ ಪಕ್ಷಗಳ ಸಚಿವರು ರಾಜೀನಾಮೆ ನೀಡಿದ್ದು, ಸಂಪುಟ ಪುನರ್ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದು, ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ಮನವೊಲಿಕೆಗೆ ಶಾಸಕರು ಮಣಿಯದಿದ್ದರೆ ಕಾನೂನು ಹೋರಾಟವನ್ನು ಮುಂದುವರೆಸಲು ಉಭಯ ಪಕ್ಷಗಳು ತೀರ್ಮಾನಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ