ಬಿಜೆಪಿಯವರ ರಾಜಕೀಯ ಕುತಂತ್ರವನ್ನು ರಾಜಕೀಯವಾಗೆ ಎದುರಿಸಲು ನಿರ್ಧಾರ

ಬೆಂಗಳೂರು, ಜು.8- ಮುಖ್ಯಮಂತ್ರಿ ಕುಮಾರಸ್ವಾಮಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೊಂದಿಗೆ ಕಾಂಗ್ರೆಸ್ ನಾಯಕರು ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ಕುರಿತಂತೆ ಡಿಸಿಎಂ ಪರಮೇಶ್ವರ್ ಅವರ ಗೃಹಕಚೇರಿಯಲ್ಲಿ ಸುದೀರ್ಘ ಮಾತುಕತೆ ನಡೆಸಿದರು.

ಮುಂಬೈನ ರೆಸಾರ್ಟ್‍ಗೆ ತೆರಳಿರುವ ಶಾಸಕರ ಮನವೊಲಿಸಲು ಹಾಗೂ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾಯಕರು ಒಬ್ಬರ ನಂತರ ಒಬ್ಬರನ್ನು ಸಂಪರ್ಕಿಸಿ ಮನವೊಲಿಸಲು ಹರಸಾಹಸ ಪಟ್ಟರು.

ಇವರ ಸಂಧಾನಕ್ಕೆ ಅತೃಪ್ತ ಶಾಸಕರು ಜಗ್ಗಲಿಲ್ಲ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರವನ್ನು ಕೈ ಬಿಡಬೇಕೆ, ಬೇಡವೇ ಎಂಬ ಬಗ್ಗೆಯೂ ನಾಯಕರು ಸಮಾಲೋಚನೆ ನಡೆಸಿದರು.

ಒಂದು ಹಂತದಲ್ಲಿ ಸರ್ಕಾರ ಉಳಿಸಲು ಬಿಜೆಪಿಯವರ ರಾಜಕೀಯ ಕುತಂತ್ರವನ್ನು ರಾಜಕೀಯವಾಗಿಯೇ ಎದುರಿಸಲು ನಿರ್ಧರಿಸಲಾಯಿತು. ಅಲ್ಲದೆ, ಎಲ್ಲಿಯವರೆಗೂ ಸಾಧ್ಯವೋ ಅಲ್ಲಿಯವರೆಗೂ ಸರ್ಕಾರವನ್ನು ಮುನ್ನಡೆಸುವ ಬಗ್ಗೆಯೂ ಚಿಂತನ-ಮಂಥನ ನಡೆಯಿತು.

ಪರಿಸ್ಥಿತಿ ಕೈ ಮೀರಿದರೆ ರಾಜೀನಾಮೆ ಕೊಡಬೇಕೆ ಎಂಬೆಲ್ಲ ಬಗ್ಗೆಯೂ ನಾಯಕರ ಸಲಹೆಗಳನ್ನು ಪಡೆಯಲಾಯಿತು. ಆದರೆ, ಕೆಲವು ಸಚಿವರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡುವುದಕ್ಕೆ ವಿರೋಧಿಸಿದರು.

ಸಭೆಯಲ್ಲಿ ಡಿಸಿಎಂ ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ