ಲೀಡ್ಸ್, ಜು.7-ಭಾರತ-ಶ್ರೀಲಂಕಾ ನಡುವೆ ನಿನ್ನೆ ಇಲ್ಲಿ ನಡೆದ ವಿಶ್ವ ಕಪ್ ಕ್ರಿಕೆಟ್ ಪಂದ್ಯದ ವೇಳೆ ಹೆಡ್ಡಿಂಗ್ಲಿ ಕ್ರೀಡಾಂಗಣದ ಮೇಲೆ ಭಾರತ ವಿರೋಧ ಬ್ಯಾನರ್‍ಗಳನ್ನು ಹೊತ್ತು ಮೂರು ವಿಮಾನಗಳು ಹಾರಾಡಿದ ಘಟನೆಗಳ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತೀವ್ರ ಆತಂಕ ವ್ಯಕ್ತಪಡಿಸಿದೆ.
ಭಾರತ ವಿರೋಧ ಬ್ಯಾನರ್‍ಗಳ ಪ್ರದರ್ಶನ ಆಕ್ಷೇಪಾರ್ಹ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಸಿಸಿಐ ಈ ಸಂಬಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಗೆ ಪ್ರತಿಭಟನಾ ಪತ್ರ ಸಲ್ಲಿಸದೆ. ಅಲ್ಲದೇ ತನ್ನ ಆಟಗಾರರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಪ್ರಶ್ನಿಸಿದೆ.
ನಿನ್ನೆ ಭಾರತ-ಶ್ರೀಲಂಕಾ ನಡುವಣ ಪಂದ್ಯ ಆರಂಭವಾದ ಕೆಲವು ನಿಮಿಷಗಳ ನಂತರ ವಿಮಾನವೊಂದು ಕ್ರೀಡಾಂಗಣದ ಮೇಲೆ ಹಾರಿ ಕಾಶ್ಮೀರಕ್ಕಾಗಿ ನ್ಯಾಯ ಎಂಬ ಬ್ಯಾನರ್‍ನನ್ನು ಪ್ರದರ್ಶಿಸಿತು.
ಅರ್ಧ ನಿಮಿಷಗಳ ತರುವಾಯ ಮತ್ತೊಂದು ವಿಮಾನ ಕ್ರೀಡಾಂಗಣದ ಮೇಲೆ ಹಾರಿತು. ಆ ವಿಮಾನದಲ್ಲಿ ಭಾರತ ನರಮೇಧ ನಿಲ್ಲಿಸಲಿ, ಕಾಶ್ಮೀರ ಮುಕ್ತಗೊಳಿಸಲಿ ಎಂಬ ಮತ್ತೊಂದು ಬ್ಯಾನರ್ ಕಂಡುಬಂದಿತು.
ವಿರಾಮದ ಬಳಿಕ, ಭಾರತವು ಶ್ರೀಲಂಕಾದ ನೀಡಿದ ರನ್‍ಗಳ ಸವಾಲನ್ನು ಬೆನ್ನತ್ತುತ್ತಿದ್ದಾಗ ಮೂರನೇ ವಿಮಾನ ಮತ್ತೆ ಹೆಡ್ಡಿಂಗ್ಲಿ ಕ್ರೀಡಾಂಗಣದ ಮೇಲೆ ಹಾರುತ್ತಾ ಗುಂಪು ಹತ್ಯೆ ಕೊನೆಗೊಳಿಸಲು ನೆರವಾಗಿ ಎಂಬ ಘೋಷಣೆಯನ್ನು ಪ್ರದರ್ಶಿಸಿತು.
ಈ ಮೂರು ಘಟನೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಬಿಸಿಸಿಐ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಇ ಬಗ್ಗೆ ಪತ್ರವೊಂದನ್ನು ಬರೆದು ತನ್ನ ಆಟಗಾರರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.