ಬೆಂಗಳೂರು, ಜು.7-ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದ್ದು, ಸಮ್ಮಿಶ್ರ ಸರ್ಕಾರದ ಉಳಿಯುವಿಕೆ, ನಾವು ನಡೆಸುವ ಪ್ರಯತ್ನಗಳು ಫಲ ನೀಡುವ ಬಗ್ಗೆ ಅನುಮಾನ ಇದೆ ಎಂದು ಕಾಂಗ್ರೆಸ್ ನಾಯಕರು ಕೈ ಚೆಲ್ಲಿದ್ದಾರೆ.
ಆಪರೇಷನ್ ಕಮಲಕ್ಕೆ ತುತ್ತಾಗಿ ಕಾಂಗ್ರೆಸ್‍ನ 9 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನೂ ಸುಮಾರು 8 ಮಂದಿ ಶಾಸಕರು ರಾಜೀನಾಮೆ ನೀಡಲು ತಯಾರಾಗಿ ನಿಂತಿದ್ದಾರೆ. ಈಗಾಗಲೇ ರಾಜೀನಾಮೆ ನೀಡಿರುವವರನ್ನು ಬಿಜೆಪಿಯವರು ಮುಂಬೈಗೆ ಕರೆದುಕೊಂಡು ಹೋಗಿ ಹೊಟೇಲ್‍ನಲ್ಲಿರಿಸಿದ್ದಾರೆ. ಈ ಸಮಯದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳುವುದು ಕಷ್ಟ ಸಾಧ್ಯವಿದೆ ಎಂದು ಸಿದ್ದರಾಮಯ್ಯ ಹೈಕಮಾಂಡ್ ನಾಯಕರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.
ನಿನ್ನೆ ಸಂಜೆ ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ತಡರಾತ್ರಿಯವರೆಗೂ ನಿರಂತರವಾಗಿ ಸಭೆಗಳನ್ನು ನಡೆಸಿದರು.
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಜೊತೆ ಸಭೆ ನಡೆಸಿದರು. ನಂತರ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕವಾಗಿ ವೇಣುಗೋಪಾಲ್ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸೋನಿಯಾಗಾಂಧಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಅಹಮ್ಮದ್ ಪಟೇಲ್ ಅವರು ಸಿದ್ದರಾಮಯ್ಯ ಅವರನ್ನು ದೂರವಾಣಿ ಮೂಲಕ ಮಾತನಾಡಿದ್ದು, ರಾಜಕೀಯ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹೇಗಾದರೂ ಮಾಡಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡಿ, ಅತೃಪ್ತರನ್ನು ಮನವೊಲಿಸಿ ಎಂದು ಹೈಕಮಾಂಡ್ ಸಲಹೆ ನೀಡಿದೆ. ಆದರೆ ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದೆ. ಶಾಸಕರು ನೇರವಾಗಿ ರಾಜೀನಾಮೆ ಕೊಟ್ಟು ಪತ್ರಿಕಾ ಹೇಳಿಕೆಗಳನ್ನೂ ನೀಡಿದ್ದಾರೆ. ಈ ಹಂತದಲ್ಲಿ ಮನವೊಲಿಕೆ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಆದರೂ ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರುಗಳ ನಡವಳಿಕೆಯಿಂದಾಗಿ ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದರು. ಹಲವಾರು ಬಾರಿ ಈ ಬಗ್ಗೆ ಎಚ್ಚರಿಕೆ ನೀಡಿದರೂ, ಜೆಡಿಎಸ್ ನಾಯಕರು ತಮ್ಮ ನಡವಳಿಕೆ ತಿದ್ದಿಕೊಳ್ಳಲಿಲ್ಲ. ಇದರಿಂದಾಗಿ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.