ಬೆಂಗಳೂರು, ಜು.6-ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ, ಅಸ್ಥಿರಗೊಳಿಸಲು ಬಿಜೆಪಿ ನಡೆಸುತ್ತಿರುವ ಕುದುರೆ ವ್ಯಾಪಾರ ಯಶಸ್ವಿಯಾಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಮೂರು ದಿನ ಕಾಲ ನನ್ನ ಸ್ವಕ್ಷೇತ್ರವಾದ ಕನಕಪುರದಲ್ಲಿ ಜನರನ್ನು ಭೇಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆ. ದಿಢೀರ್ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನನ್ನ ಪ್ರವಾಸ ಮಾಡುತ್ತಿದ್ದೇನೆ. ತಕ್ಷಣವೇ ಬೆಂಗಳೂರಿಗೆ ತೆರಳುತ್ತಿದ್ದೇನೆ. ಸಂಜೆ 5 ಗಂಟೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ನಾನು ಮತ್ತು ಪಕ್ಷದ ಕೆಲವು ಹಿರಿಯ ನಾಯಕರು, ಶಾಸಕರು, ಕಾರ್ಪೊರೇಟರ್ಗಳ ಜೊತೆ ಸಭೆ ನಡೆಸುತ್ತೇವೆ. ಯಾವುದೇ ಅಸಮಾಧಾನಗಳಿದ್ದರೂ ಅದನ್ನು ಬಗೆಹರಿಸುತ್ತೇವೆ. ಸರ್ಕಾರ ಮುಂದಿನ ವರ್ಷ ಸುಭದ್ರವಾಗಿರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜೆಡಿಎಸ್-ಕಾಂಗ್ರೆಸ್‍ನ ಯಾವ ಶಾಸಕರು ಬಿಜೆಪಿಯತ್ತ ತಲೆ ಹಾಕುವುದಿಲ್ಲ ಎಂಬ ವಿಶ್ವಾಸವಿದೆ. ಆದರೆ ವಾಸ್ತವ ಏನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಆ ಕಾರಣಕ್ಕಾಗಿಯೇ ಶಾಸಕರ ಜೊತೆ ಸಭೆ ಆಯೋಜಿಸಿದ್ದೇವೆ ಎಂದು ಹೇಳಿದರು.
ಕೆಲವು ಶಾಸಕರು ಇಂದು ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಭೇಟಿ ಮಾಡಲು ಹೋಗಿರುವುದು ನಿಜ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಶಾಸಕರ ಜೊತೆ ಚರ್ಚೆ ಮಾಡಿದ ನಂತರ ಉಳಿದ ವಿಷಯಗಳ ಬಗ್ಗೆ ಮಾತನಾಡುತ್ತೇನೆ. ಬೆಂಗಳೂರು ನಗರದ ಬಿಜೆಪಿಯ ಕೆಲವು ಮಾಜಿ ಶಾಸಕರು ಗುತ್ತಿಗೆದಾರರು ಮತ್ತು ಡೆವಲಪರ್‍ಗಳಿಗೆ ಪೋನ್ ಮಾಡಿ ಹಣ ವಸೂಲಿ ಮಾಡುವ ಕಾರ್ಯಕ್ರಮ ಆರಂಭಿಸಿದ್ದಾರೆ. ಶಾಸಕರನ್ನು ಖರೀದಿಸಲು ನಮಗೆ ಹಣ ಬೇಕು ಎಂದು ಕೇಳುತ್ತಿದ್ದಾರೆ. ದನಗಳಂತೆ ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮೆಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ, ಒಗ್ಗಟ್ಟಗಿರುತ್ತೇವೆ ಎಂದು ಹೇಳಿದರು.
ಸ್ಪೀಕರ್ ಕಚೇರಿಗೆ ತೆರಳಿದಾಕ್ಷಣ ರಾಜೀನಾಮೆ ಕೊಡಲು ಆಗುವುದಿಲ್ಲ. ರಾಜೀನಾಮೆಗೆ ಕೆಲವು ಪದ್ಧತಿಗಳಿವೆ ಅದನ್ನು ಅನುಸರಿಸಬೇಕು ಎಂದು ಹೇಳಿದರು.
ಸರ್ಕಾರದ ಸಚಿವರೊಬ್ಬರ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಈ ರೀತಿಯ ಆರೋಪಗಳು ಸಾಮಾನ್ಯ. ನನ್ನ ಮೇಲೆಯೂ ಒಂದೂವರೆ ವರ್ಷದಿಂದಲೂ ಆರೋಪಗಳು ಕೇಳಿ ಬರುತ್ತಲೇ ಇವೆ. ಆದರೆ ಯಾವುದೂ ಏನೂ ಆಗಿಲ್ಲ. ಸಚಿವರ ಮೇಲಿರುವ ಆರೋಪಗಳು ಸಾಬೀತಾಗುವುದಿಲ್ಲ ಎಂದು ಹೇಳಿದರು.