ಬೆಂಗಳೂರು, ಜು.6-ರಾಜೀನಾಮೆ ನೀಡುವ ಬೆದರಿಕೆಯೊಡ್ಡುತ್ತಿರುವ ಶಾಸಕರನ್ನು ಯಾರೂ ಮನವೊಲಿಸುವ ಪ್ರಯತ್ನ ಮಾಡಬಾರದು ಎಂದು ಜೆಡಿಎಸ್ ವಕ್ತಾರ ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ರಾಜೀನಾಮೆ ನೀಡುವ ಪ್ರಯತ್ನವನ್ನು ನಿರ್ಲಕ್ಷಿಸಬೇಕು.ಸಂಧಾನ ಮಾತುಕತೆಗೆ ಪ್ರಯತ್ನಿಸಬಾರದು ಎಂದು ಹೇಳಿದ್ದಾರೆ.
ರಾಜೀನಾಮೆ ನೀಡುವುದಾಗಿ ಹೇಳುವ ಮೂಲಕ ಶಾಸಕರು ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ. ಯಾರಿಗೆ ಹೆದರದೇ ಇದ್ದರೂ ಶಾಸಕರು ತಮ್ಮನ್ನು ಆರಿಸಿ ಕಳುಹಿಸಿದ ಮತದಾರರಿಗಾದರೂ ಹೆದರಲೇಬೇಕು ಎಂದು ಸಲಹೆ ನೀಡಿದರು.
ನನಗಿರುವ ಮಾಹಿತಿ ಪ್ರಕಾರ ಯಾವ ಶಾಸಕರೂ ರಾಜೀನಾಮೆ ಕೊಡುವುದಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಉಳಿಯಲಿದೆ.ಈ ಕ್ಷಣದವರೆಗೂ ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.