ಬೆಂಗಳೂರು, ಜು.6-ರಾಜಕೀಯ ಪರಿಸ್ಥಿತಿ ಉಲ್ಬಣಿಸಿದ ಬೆನ್ನಲ್ಲೇ ಕಾಂಘ್ರೆಸ್ ಎಲ್ಲಾ ಸಚಿವರು ರಾಜೀನಾಮೆ ನೀಡಿ ಸಂಪುಟ ಪುನಾರಚನೆಗೆ ಸಹಕರಿಸಬೇಕೆಂದು ಹೈಕಮಾಂಡ್ ಕಟ್ಟಪ್ಪಣೆ ಮಾಡಿದೆ.
ತಮಿಳುನಾಡಿನ ಕಾಮರಾಜ ಸೂತ್ರವನ್ನು ಅನುಸರಿಸಿ ಸಮ್ಮಿಶ್ರ ಸರ್ಕಾರವನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. 13 ಮಂದಿ ಶಾಸಕರು ರಾಜೀನಾಮೆ ನೀಡಿದರೆ ಸಮ್ಮಿಶ್ರ ಸರ್ಕಾರ ಪತನವಾಗುವುದು ಖಚಿತವಾಗಿದೆ.ಆದರೆ ಹೈಕಮಾಂಡ್ಗೆ ಸಮ್ಮಿಶ್ರ ಸರ್ಕಾರ ಕಳೆದುಕೊಳ್ಳಲು ಇಷ್ಟವಿಲ್ಲ. ರಾಜ್ಯದ ನಾಯಕರು ಸರ್ಕಾರ ಹೋದರೇ ಹೋಗಲಿ ಎಂಬ ಭಾವನೆ ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿದ್ದು, ಎಲ್ಲಾ ಸಚಿವರು ಹಾಗೂ ಉಪಮುಖ್ಯಮಂತ್ರಿ ಸಹಿತ ರಾಜೀನಾಮೆ ನೀಡಬೇಕೆಂದು ಸೂಚನೆ ರವಾನಿಸಿದೆ.
ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಬೇಕಾದರೆ ಸಂಪುಟ ಪುನಾರಚನೆಯಾಗಲೇಬೇಕು. ಅದಕ್ಕಿರುವ ಮಾರ್ಗ ಎಂದರೆ ಅತೃಪ್ತರಿಗೆ ಸಚಿವ ಸ್ಥಾನ ನೀಡುವುದು. ಹೊಸಬರಿಗೆ ಅವಕಾಶ ಮಾಡಿಕೊಡಬೇಕಾದರೆ ೀಗಾಗಲೇ ನಾಲ್ಕು ತಿಂಗಳಿಂದ ಅಧಿಕಾರ ಅನುಭವಿಸಿರುವ ಸಚಿವರು ರಾಜೀನಾಮೆ ನೀಡಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದೆ.
ಇಂದು ಸಂಜೆ ನಡೆಯುವ ಕಾಂಗ್ರೆಸ್ನ ಮಹತ್ವದ ಸಭೆಯಲ್ಲಿ ಸಚಿವರಿಗೆ ರಾಜೀನಾಮೆ ನೀಡಲು ಸೂಚಿಸಲಾಗುತ್ತದೆ ಎಂದು ಹೇಳಲಾಗಿದೆ.
ರಾಜಕೀಯ ಕ್ಷಣ ಕ್ಷಣಕ್ಕೂ ಮಹತ್ವದ ತಿರುವು ಪಡೆಯುತ್ತಿದ್ದು, ಸರ್ಕಾರ ಉಳಿಯುತ್ತದೋ ಅಳಿಯುತ್ತದೋ ಎಂಬ ಗೊಂದಲಗಳು ತೀವ್ರವಾಗಿ ಕಾಡಲಾರಂಭಿಸಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗಮಿಸಿದ್ದ ಅತೃಪ್ತ ಶಾಸಕರನ್ನು ಕರೆದೊಯ್ಯಲು ಕಾಂಗ್ರೆಸ್ನ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೆರತಿ ಬಸವರಾಜ್ ಅವರು ವಿಧಾನಸೌಧದ ಸ್ಪೀಕರ್ ಕಚೇರಿಗೆ ಆಗಮಿಸಿದರು.
ಮಧ್ಯಾಹ್ನ 1.30 ರ ಸುಮಾರಿಗೆ ಮೂರೂ ಜನ ಒಟ್ಟಾಗಿ ಆಗಮಿಸಿ ಸ್ಪೀಕರ್ ಕಚೇರಿ ಒಳಗೆ ಹೋದರು. ಈಗಾಗಲೇ ರಾಜೀನಾಮೆ ನೀಡಲು ಆಗಮಿಸಿದ್ದ ಸುಮಾರು 8 ರಿಂದ 9 ಮಂದಿ ಶಾಸಕರು ಒಳಗಿದ್ದು, ಅವರನ್ನು ಈ ಮೂವರು ಶಾಸಕರು ಮನವೊಲಿಸುವ ಪ್ರಯತ್ನ ಮಾಡಿದರು ಎನ್ನಲಾಗಿದೆ.
ಸ್ಪೀಕರ್ ಕಚೇರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, ನಾನು ರಾಜೀನಾಮೆ ನೀಡಲು ಬಂದಿಲ್ಲ. ನಾನು ಮುಕ್ತವಾಗಿದ್ದೇನೆ. ಈಗಾಗಲೇ ರಾಜೀನಾಮೆ ನೀಡಲು ಬಂದಿರುವವರನ್ನು ವಾಪಸ್ ಕರೆದುಕೊಂಡು ಹೋಗಲು ಬಂದಿದ್ದೇನೆ. ಅವರನ್ನು ಭೇಟಿ ಮಾಡಿ ಬಂದ ಬಳಿಕ ಹೆಚ್ಚಿನ ವಿಚಾರ ಮಾತನಾಡುತ್ತೇನೆ ಎಂದು ಹೇಳಿದರು.
ಶಾಸಕರಾದ ಮುನಿರತ್ನ ಮತ್ತು ಭೆರತಿಬಸವರಾಜ್ ಅವರು ಯಾವುದೇ ಮಾಹಿತಿ ನೀಡಲು ನಿರಾಕರಿಸಿ ಎಲ್ಲ ವಿಚಾರ ಸೋಮಶೇಖರ್ ಮಾತನಾಡುತ್ತಾರೆ ಎಂದು ಒಳ ಹೋದರು.