ವಾಷಿಂಗ್ಟನ್, ಜು.5-ಅಮೆರಿಕದಲ್ಲಿ ನಿನ್ನೆ ಸ್ವಾತಂತ್ರೋತ್ಸವದ ಸಡಗರ-ಸಂಭ್ರಮ. ರಾಜಧಾನಿ ವಾಷಿಂಗ್ಟನ್‍ನಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೃಹತ್ ಮಿಲಿಟರಿ ಪರೇಡ್‍ನನ್ನು ಸಾಕ್ಷೀಕರಿಸಿದರು.
ಬ್ರಿಟಿನ್ ಆಳ್ವಿಕೆಯಿಂದ ಅಮೆರಿಕ ಜುಲೈ 4,1776ರಂದು ವಿಮೋಚನೆಗೊಂಡು ಸ್ವಾತಂತ್ರ್ಯ ಗಳಿಸಿತು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಟ್ರಂಪ್ ಹಿಂದಿನ ಸಂಪ್ರದಾಯವನ್ನು ಬದಿಗೊತ್ತಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. 70 ವರ್ಷದಲ್ಲಿ ಇದೇ ಮೊದಲ ಬಾರಿಗೆ ಟ್ರಂಪ್ ಸ್ವಾತಂತ್ರೋತ್ಸವ ಭಾಷಣ ಮಾಡಿರುವುದಕ್ಕೆ ವಿರೋಧ ಪಕ್ಷವಾದ ಡೆಮೊಕ್ರಾಟಿಕ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಈ ಸಮಾರಂಭವನ್ನು ರಾಜಕೀಯ ಉದ್ದೇಶಗಳಿಗಾಗಿ ಟ್ರಂಪ್ ದುರುಪಯೋಗ ಮಾಡಿಕೊಂಡಿದ್ಧಾರೆ ಎಂದು ಪ್ರತಿಪಕ್ಷಗಳ ಮುಖಂಡರು ಆರೋಪಿಸಿದ್ದಾರೆ.
ವಿಶ್ವದ ಮಹಾನ್ ದೇಶವಾಗಿರುವ ಅಮೆರಿಕದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಯೋಧರು ಮತ್ತು ವೀರಾಗ್ರಣಿ ಸೇನಾನಿಗಳಿಗೆ ತಾವು ಸೆಲ್ಯೂಟ್ ಮಾಡುವುದಾಗಿ ಟ್ರಂಫ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಸ್ವಾತಂತ್ರೋತ್ಸವದ ಸೇನಾ ಪಥಸಂಚಲನ ಕಾರ್ಯಕ್ರಮಚಲ್ಲಿ ಪ್ರಥಮ ಮಹಿಳೆ (ಅಧ್ಯಕ್ಷರ ಪತ್ನಿ) ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್, ಟ್ರಂಪ್ ಸಂಪುಟ ಸಹೋದ್ಯೋಗಿಗಳು ಹಾಗೂ ಸೇನಾ ಪಡೆಗಳ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.