ನವದೆಹಲಿ: ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮತ್ತೊಮ್ಮೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡುವಲ್ಲಿ ಕಾರಣರಾದ ಎಲ್ಲ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದಲ್ಲಿ ಮೊದಲ ಬಾರಿಗೆ ಶೇ.67.9 ಮತದಾನ ನಡೆದಿದೆ. ಯುವಜನತೆ, ಹೊಸ ಮತದಾರರು, ಮಹಿಳೆಯರು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.
2014-19ರ ಅವಧಿಯಲ್ಲಿ ರಾಜ್ಯ ಕೇಂದ್ರಗಳ ಸಂಬಂಧ ಸುಧಾರಣೆಯಾಗಿದೆ. ಜಿಎಸ್ಟಿಯನ್ನು ಜಾರಿಗೆ ತಂದಿದ್ದೇವೆ. Reform, Perform, Transform ಮಂತ್ರಗಳನ್ನು ಮುಂದಿಟ್ಟು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಹಣಕಾಸು ಸಚಿವರು ಇಲ್ಲಿಯವರೆಗೆ ಬಜೆಟ್ ಪ್ರತಿಯನ್ನು ಸೂಟ್ಕೇಸ್ನಲ್ಲಿ ಹೊತ್ತುಕೊಂಡು ಸಂಸತ್ ಪ್ರವೇಶಿಸುತ್ತಿದ್ದರು. ಆದರೆ ನಿರ್ಮಲಾ ಸೀತಾರಾಮನ್ ಅವರು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯ ಒಳಗಡೆ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.
ಹಣಕಾಸು ಸಚಿವಾಯಕ್ಕೆ ಆಗಮಿಸಿದ ಸಚಿವೆ ಬಜೆಟ್ ದಾಖಲೆಗಳನ್ನು ಬ್ರೀಫ್ಕೇಸ್ ಬದಲು ಬ್ಯಾಗ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿರುವುದು ವಿಶೇಷವಾಗಿತ್ತು. ಈ ವೇಳೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಹಣಕಾಸು ಸಚಿವಾಲಯದ ಇತರೇ ಅಧಿಕಾರಿಗಳು ಸಚಿವೆಗೆ ಸಾಥ್ ನೀಡಿದರು.
ಕೆಂಪುಬಟ್ಟೆಯಲ್ಲಿ ಬಜೆಟ್ ಗೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟು ಆ ಬಟ್ಟೆಯನ್ನು ನಾಲ್ಕು ಮಡಿಕೆ ಮಾಡಿ ರಿಬ್ಬನ್ನಿಂದ ಕಟ್ಟಲಾಗಿದೆ. ಅದರ ಮೇಲೆ ರಾಷ್ಟ್ರಲಾಂಛನವಾದ ನಾಲ್ಕು ಮುಖದ ಸಿಂಹದ ಚಿತ್ರವಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣಿಯನ್ ಅವರು, ಬಟ್ಟೆಯಲ್ಲಿ ಕಟ್ಟುವುದು ನಮ್ಮ ದೇಶದ ಸಂಪ್ರದಾಯ. ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರಬರಲು ಈ ಬಾರಿ ಬ್ರೀಫ್ಕೇಸ್ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.