ನವದೆಹಲಿ,ಜು.5-ವಾರ್ಷಿಕ ಐದು ಲಕ್ಷ ವರಮಾನ ಹೊಂದಿರುವವರಿಗೆ ಕೇಂದ್ರ ಸರ್ಕಾರ ತೆರಿಗೆ ವಿನಾಯ್ತಿಯನ್ನು ನೀಡುವ ಮೂಲಕ ಜನಸಾಮಾನ್ಯರ ಹೊರೆಯನ್ನು ತಗ್ಗಿಸಿದೆ.
ಇದೇ ವೇಳೆ ಇನ್ನು ಮುಂದೆ ತೆರಿಗೆ ಪಾವತಿಸುವವರು ಪಾನ್ಕಾರ್ಡ್ ಬದಲಿಗೆ ಆಧಾರ್ಕಾರ್ಡ್ ಸಲ್ಲಿಕೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ನಲ್ಲಿಂದು ಪ್ರಕಟಿಸಿದರು.
ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಅವರು, ಐದು ಲಕ್ಷ ವರಮಾನ ಹೊಂದಿರುವವರು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಿಲ್ಲ. ಈ ಬಾರಿ ನಾವು ಜನರಿಗೆ ಹೊರೆಯಾಗದಂತೆ ತೆರಿಗೆಯನ್ನು ಸಹ ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈವರೆಗೂ ತೆರಿಗೆ ಪಾವತಿ ಮಾಡುವವರಿಗೆ ಪಾನ್ಕಾರ್ಡ್ ಕಡ್ಡಾಯ ಮಾಡಲಾಗಿತ್ತು. ಇನ್ನು ಮುಂದೆ ತೆರಿಗೆದಾರರು ಆಧಾರ್ ಕಾರ್ಡ್ ಮೂಲಕವು ತೆರಿಗೆ ಕಟ್ಟಬಹುದಾಗಿದೆ.
ದೇಶದಲ್ಲಿ ತೆರಿಗೆ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನೇರ ತೆರಿಗೆ ಕಟ್ಟುವವರ ಸಂಖ್ಯೆ 11 ಕೋಟಿ ಇದ್ದು, ಕಳೆದ ಸಾಲಿಗಿಂತ ಶೇ.78ರಷ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ವಾರ್ಷಿಕ 400 ಕೋಟಿ ವಹಿವಾಟು ನಡೆಸುವ ಉದ್ದಿಮೆದಾರರಿಗೆ ಶೇ.25ರಷ್ಟು ತೆರಿಗೆಯನ್ನು ವಿಧಿಸಲಾಗುವುದು. 1.25 ಲಕ್ಷವರೆಗಿನ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿದರೆ, 5 ಲಕ್ಷ ಮೌಲ್ಯದ ವಾಹನ ಉತ್ಪಾದನೆ ಮಾಡುವವರಿಗೆ ಶೇ.5ರಷ್ಟು ಜಿಎಸ್ಟಿಯನ್ನು ಇಳಿಕೆ ಮಾಡುವುದಾಗಿಯೂ ಘೋಷಿಸಿದರು.
10 ಲಕ್ಷದವರೆಗೆ ವಾಹನ ಖರೀದಿಸಿದರೆ 1.25 ಲಕ್ಷ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡಲಿದೆ. 7 ಲಕ್ಷದವರೆಗಿನ ಸಾಲಕ್ಕೆ 15 ವರ್ಷ ತೆರಿಗೆ ವಿನಾಯ್ತಿ ನೀಡಲಾಗುವುದು. 45 ಲಕ್ಷದ ಮೌಲ್ಯದ ಮನೆ ಖರೀದಿಸಿದರೆ ತೆರಿಗೆ ವಿನಾಯ್ತಿ ಸಿಗಲಿದೆ ಎಂದು ವಿವರಿಸಿದರು.
ದೇಶದಲ್ಲಿ ನಗದು ವ್ಯವಹಾರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಚಿವರು ತಿಳಿಸಿದರು.