ಮುಂಬಯಿ: ಇಂದು ಮಂಡಿಸಲ್ಪಡುವ ಕೇಂದ್ರ ಬಜೆಟ್ ಮೇಲೆ ದೇಶದ ಹಣಕಾಸು ರಂಗದ ದೃಷ್ಟಿ ಕೇಂದ್ರೀಕೃತವಾಗಿರುವಂತೆಯೇ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ 40,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಮತ್ತೆ ಸಂಪಾದಿಸಿದೆ.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 12,000 ಅಂಕಗಳ ಸನಿಹಕ್ಕೆ ಹೆಜ್ಜೆ ಇರಿಸಿದ್ದು ದೊಡ್ಡ ನೆಗೆತಕ್ಕೆ ಸಜ್ಜಾಗಿದೆ.
ಬೆಳಗ್ಗೆ 10.15ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕ 71.23 ಅಂಕಗಳ ಮಟ್ಟದೊಂದಿಗೆ 39,979.29 ಅಂಕಗಳ ಮಟ್ಟದಲ್ಲೂ ನಿಫ್ಟಿ 15.00 ಅಂಕಗಳ ಮುನ್ನಡೆಯೊಂದಿಗೆ 11,991.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಟಾಪ್ ಗೇನರ್ ಗಳ ಪೈಕಿ ಇಂಡಸ್ ಇಂಡ್ ಬ್ಯಾಂಕ್, ಎಲ್ ಆ್ಯಂಡ್ ಟಿ, ಎಚ್ ಯು ಎಲ್, ಕೋಟಕ್ ಬ್ಯಾಂಕ್, ಎಚ್ ಡಿ ಎಪ್ ಸಿ, ಏಶ್ಯನ್ ಪೇಂಟ್, ಬಜಾಜ್ ಆಟೋ ಮತ್ತು ಆರ್ಐಎಲ್ ಶೇರುಗಳು ಶೇ.1.14ರ ಏರಿಕೆಯನ್ನು ದಾಖಲಿಸಿದವು.
ಇದೇ ವೇಳೆ ಎಸ್ ಬ್ಯಾಕ್, ಒಎನ್ಜಿಸಿ, ವೇದಾಂತ, ಎನ್ಟಿಪಿಸಿ, ಟಾಟಾ ಮೋಟರ್, ಹೀರೋ ಮೋಟೋ ಕಾರ್ಪ್, ಐಟಿಸಿ, ಭಾರ್ತಿ ಏರ್ಟೆಎಲ್,ಟಿಸಿಎಸ್ ಶೇರುಗಳು ಶೇ1.82ರ ನಷ್ಟಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 16 ಪೈಸೆಗಳ ನಷ್ಟಕ್ಕೆ ಗುರಿಯಾಗಿ 68.66 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಅಂತಾರಾಷ್ಟ್ರೀಯ ಬ್ರೆಂಟ್ ಕಚ್ಚಾ ತೈಲ ಶೇ.0.05ರ ಇಳಿಕೆಯನ್ನು ದಾಖಲಿಸಿ ಬ್ಯಾರಲ್ ಗೆ 63.27 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.