ಮುಂಬೈ, ಜು.4-ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಅದು ಇನ್ನು ಹತ್ತುಪಟ್ಟು ತೀವ್ರವಾಲಿದೆ ಎಂದು ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಹೇಳಿದ್ದಾರೆ.
ಆರ್‍ಎಸ್‍ಎಸ್ ಹೂಡಿದ್ದ ಮಾನಹಾನಿ ಖಟ್ಲೆ ಪ್ರಕರಣದಿಂದ ನಿರಾಳರಾದ ನಂತರ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಬಡವರು, ರೈತರು ಮತ್ತು ಕಾರ್ಮಿಕರ ವಿರುದ್ಧ ಹೋರಾಡುತ್ತೇನೆ. ನನ್ನ ಹೋರಾಟ ನಿರಂತರವಾಗಿ ನಡೆಯಲಿ ಎಂದರು.
ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ನನ್ನ ಹೋರಾಟದ ಧ್ವನಿ ಇನ್ನೂ ಹತ್ತುಪಟ್ಟು ಹೆಚ್ಚಾಗಲಿದೆ ಎಂದ ಅವರು, ಈ ಪಕ್ಷದ ನೀತಿಗಳ ವಿರುದ್ಧ ಆಕ್ರಮಣ ತೀವ್ರಗೊಂಡಿದೆ. ಇದಕ್ಕೆ ನನಗೆ ಖುಷಿಯಾಗಿದೆ ಎಂದು ರಾಹುಲ್ ಹೇಳಿದರು.
ರಾಜೀನಾಮೆ ಹಿಂಪಡೆಯಲು ಕಾಂಗ್ರೆಸ್ ಕಾರ್ಯಕರ್ತರ ಮನವಿ:
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಮುಂಬೈನಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.
ಮಾನಹಾನಿ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲು ಇಂದು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿ ಏರ್ಪೋರ್ಟ್ನಿಂದ ರಾಹುಲ್ ಹೊರಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣಾ ಪತ್ರಗಳನ್ನು ತೋರಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಮತ್ತು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಮನವಿ ಮಾಡಿದರು.
ನಂತರ ಅವರು ಕೋರ್ಟ್‍ಗೆ ಹಾಜರಾಗಿ ವಿಚಾರಣೆ ನಂತರ ಹೊರಬರುತ್ತಿದ್ದಂತೆ ನ್ಯಾಯಾಲಯ ಸಂಕೀರ್ಣದಲ್ಲಿ ಹಾಜರಿದ್ದ 150ಕ್ಕೂ ಹೆಚ್ಚು ಕಾರ್ಯಕರ್ತರು ಘೋಷಣಾ ಪತ್ರದೊಂದಿಗೆ ರಾಹುಲ್ ಅವರಿಗೆ ಮನವಿ ಮಾಡಿ. ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಆಗ್ರಹಿಸಿದರು.