ನವದೆಹಲಿ, ಜು.4- ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ಕೋರಿ ಕನ್ನಡ ಸಂಘ-ಸಂಸ್ಥೆಗಳು ನಡೆಸುತ್ತಿದ್ದ ಹೋರಾಟಕ್ಕೆ ಫಲ ಲಭಿಸಿದೆ.
ಕನ್ನಡ ಭಾಷೆಯಲ್ಲಿ ಬ್ಯಾಂಕಿಂಗ್ ಮತ್ತಿತರ ಪರೀಕ್ಷೆಗಳನ್ನು ಬರೆಯಲು ಅನುಮತಿ ನೀಡಲಾಗಿದೆ ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಇದರೊಂದಿಗೆ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಲಭಿಸಿದಂತಾಗಿದೆ.
ಈ ಮೊದಲು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅನುಮತಿ ಇತ್ತು. ನಂತರ ವಿವಿಧ ರಾಜ್ಯಗಳು ಸಲ್ಲಿಸಿದ ಮನವಿಗಳಿಗೆ ಓಗೊಟ್ಟ ಕೇಂದ್ರ ಸರ್ಕಾರ 12 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು. ಆದರೆ, ಕನ್ನಡ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂಬ ಮಾಡಿದ್ದ ಮನವಿ ಮತ್ತು ಹೋರಾಟ ಬಹುಕಾಲದಿಂದ ನೆನೆಗುದಿಯಲ್ಲಿತ್ತು.
ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ಸಂಸತ್‍ಗೆ ಆಯ್ಕೆಯಾಗಿರುವುದರಿಂದ ರಾಜ್ಯದ ಬೇಡಿಕೆಯನ್ನು ಪುರಸ್ಕರಿಸಿ ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದಾರೆ. ಇದರಿಂದಾಗಿ ಕನ್ನಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಉದ್ಯೋಗದಲ್ಲಿ ಉತ್ತಮ ಅವಕಾಶ ಲಭಿಸಲು ಅನುವು ಮಾಡಿಕೊಟ್ಟಿದ್ದಾರೆ.