ಲಾಹೋರ್, ಜು.4- ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನವು ಮುಂಬೈನಲ್ಲಿ ನಡೆದ 26/11ರ ಭಯೋತ್ಪಾದಕರ ದಾಳಿಯ ಸೂತ್ರಧಾರ ಮತ್ತು ಜಮಾತ್-ಉದ್-ದವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಆತನ 12 ಸಹಚರರ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಿಕೊಂಡಿದೆ.
ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಇಲಾಖೆ(ಸಿಟಿಡಿ) ಹಫೀಜ್ ಮತ್ತು ಇತರ 12 ಉಗ್ರರ ವಿರುದ್ಧ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆಪಾದನೆ ಮೇಲೆ ಪ್ರಕರಣಗಳನ್ನು ದೋಷಾರೋಪ ದಾಖಲಿಸಿದೆ. ಇವರು ಉಗ್ರಗಾಮಿಗಳಿಗೆ ಐದು ಟ್ರಸ್ಟ್‍ಗಳ ಮೂಲಕ ಹಣಕಾಸು ಪೂರೈಸುತ್ತಿದ್ದರು ಎಂದು ಆರೋಪಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ.
ಲಾಹೋರ್, ಗುರ್ಜನ್‍ವಾಲಾ ಮತ್ತು ಮುಲ್ತಾನ್ ನಗರಗಳಲ್ಲಿ ಹಫೀಜ್ ಮತ್ತು ಜೆಯುಡಿ ಇತರ ನಾಯಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅಲ್-ಅನ್ಫಾಲ್, ದವಾತ್-ಉಲ್-ಇರ್ಷದ್ ಮತ್ತು ಮೌಜ್-ಬಿನ್-ಜಬಾಲ್ ಸೇರಿದಂತೆ ಟ್ರಸ್ಟ್‍ಗಳ ಹೆಸರಿನಲ್ಲಿ ಹಣಗಳನ್ನು ಸಂಗ್ರಹಿಸಿ ಅವುಗಳನ್ನು ಭಯೋತ್ಪಾದನೆ ಚಟುವಟಿಕೆಗಳಿಗೆ ಪೂರೈಸಲಾಗುತ್ತಿತ್ತು ಎಂದು ದೋಷಾರೋಪಪಟ್ಟಿಯಲ್ಲಿ ಆರೋಪಿಸಲಾಗಿದೆ.
ಜೆಯುಡಿ, ಎಲ್‍ಇಟಿ ಮತ್ತು ಪಿಐಪಿ ಸೇರಿದಂತೆ ವಿವಿಧ ಸಂಘಟನೆಗಳು ವಿಶ್ವಸ್ಥ ಸಂಸ್ಥೆಗಳನ್ನು(ಟ್ರಸ್ಟ್‍ಗಳು) ಸ್ಥಾಪಿಸಿ ಆ ಮೂಲಕ ಹಣಗಳನ್ನು ಕ್ರೋಢೀಕರಿಸಿ ಉಗ್ರಗಾಮಿಗಳಿಗೆ ಮತ್ತು ಭಯೋತ್ಪಾದನೆ ಚಟುವಟಿಕೆಗಳಿಗೆ ನೆರವು ನೀಡುತ್ತಿರುವ ಬಗ್ಗೆ ಸಿಟಿಡಿ ಅಧಿಕಾರಿಗಳು ತನಿಖೆ ಮುಂದುವರಿಸಿದೆ.
ಪಾಕಿಸ್ತಾನವು ಉಗ್ರರು ಮತ್ತು ಭಯೋತ್ಪಾದನೆ ಸಂಘಟನೆಗಳ ವಿರುದ್ಧ ನಿರೀಕ್ಷಿತ ಮಟ್ಟದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಆರೋಪಗಳ ಒತ್ತಡಕ್ಕೆ ಮಣಿದು ಇಸ್ಲಾಮಾಬಾದ್ ಈಗ ಹಂತಹಂತವಾಗಿ ಉಗ್ರಗಾಮಿಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿದೆ.