ನವದೆಹಲಿ,ಜು.5- ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನು ಮುಂದೆ ದೇಶಾದ್ಯಂತ ಒನ್ ನೇಷನ್- ಒನ್ ಕಾರ್ಡ್ (ಒಂದೇ ರಾಷ್ಟ್ರ-ಒಂದೇ ಗುರುತಿನಚೀಟಿ) ನಿಯಮ ಜಾರಿಗೆ ಬರಲಿದೆ.
ನೂತನ ನಿಯಮದಂತೆ ದೇಶದ ಯಾವುದೇ ಭಾಗದಲ್ಲೂ ಪ್ರಯಾಣಿಕರು ಏಕರೂಪದ ಕಾರ್ಡ್ ಬಳಕೆ ಮಾಡಬಹುದು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋದ ವೇಳೆ ಉಂಟಾಗುತ್ತಿದ್ದ ಸಮಸ್ಯೆಯನ್ನು ನಿವಾರಿಸಲು ಒನ್ ನೇಷನ್-ಒನ್ ಕಾರ್ಡ್ ಜಾರಿ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ಪ್ರಕಟಿಸಿದರು.
ಈ ಯೋಜನೆಯಡಿ ರಾಷ್ಟ್ರಾದ್ಯಂತ ಟೋಲ್ಗೇಟ್, ನಗರ ಸಾರಿಗೆ, ಸರ್ಕಾರಿ ಸಾರಿಗೆ ಮತ್ತು ಮೆಟ್ರೋ ರೈಲುಗಳಲ್ಲಿ ಇದನ್ನೇ ಪ್ರಯಾಣಿಕರು ಬಳಸಬಹುದಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಒಂದು ಟ್ರಾವೆಲ್ ಕಾರ್ಡ್ ಖರೀದಿಸಿದರೆ ಅದನ್ನು ರೂಪ್ ವೇ ಕಾರ್ಡ್ ರೂಪದಲ್ಲಿ ಬಳಸಬಹುದಾಗಿದೆ. ಇದು ಎಲ್ಲ ರೀತಿಯ ಸಾರಿಗೆ ಸಂದರ್ಭದಲ್ಲೂ ಅನುಕೂಲವಾಗಲಿದೆ. ಟೋಲ್ ಶುಲ್ಕ ಪಾವತಿ, ಪಾರ್ಕಿಂಗ್ ಬಳಕೆಗೂ ಉಪಯೋಗಿಸಬಹುದಾಗಿದೆ.