ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಮೊದಲ ಮಹಿಳೆ-ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ,ಜು.5- ಪ್ರಸಕ್ತ ಸಾಲಿನ ಆಯವ್ಯಯವನ್ನು ಲೋಕಸಭೆಯಲ್ಲಿ ಇಂದು ಹಣಕಾಸು ಖಾತೆಯನ್ನು ಹೊಂದಿರುವ ನಿರ್ಮಲಾ ಸೀತಾರಾಮನ್ ಮಂಡಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು.

ಭಾರತದ ಸಂಸತ್ ಇತಿಹಾಸದಲ್ಲಿ ಹಣಕಾಸು ಖಾತೆ ಪಡೆದು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರೂ ಫೆ.28, 1970ರಲ್ಲಿ ಬಜೆಟ್ ಮಂಡಿಸಿದ್ದರಾದರೂ, ಅದು ಪೂರ್ಣ ಪ್ರಮಾಣದ ಬಜೆಟ್ ಆಗಿರಲಿಲ್ಲ. ಇಂದಿರಾ ಗಾಂಧಿ ಬಳಿಕ ದೇಶದ ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ಗೌರವಕ್ಕೆ ಪಾತ್ರರಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೂ ಇದು ಮೊದಲ ಬಜೆಟ್ ಆಗಿದೆ.

ಈ ಹಿಂದೆ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಹಣಕಾಸು ಖಾತೆ ಹೊಂದಿದ್ದರು. ಆದರೆ ಅವರು ಪೂರ್ಣಾವಧಿಯ ಬಜೆಟ್ ಮಂಡನೆ ಮಾಡಿರಲಿಲ್ಲ.

ಸ್ವತಂತ್ರ ಭಾರತ ಇತಿಹಾಸದಲ್ಲಿ ಮಹಿಳೆಯೊಬ್ಬರು ಹಣಕಾಸು ಖಾತೆ ಸಚಿವರಾಗಿ ಪೂರ್ಣ ಮಟ್ಟದ ಬಜೆಟ್ ಮಂಡನೆ ಮಾಡಿದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ.

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ವೇಳೆ ನಿರ್ಮಲಾ ಸೀತಾರಾಮನ್ ಅವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸಚಿವರಾಗಿದ್ದರು. ನಂತರ ಎಲ್ಲರೂ ಅಚ್ಚರಿ ಪಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಮಲಾ ಅವರಿಗೆ ಅತ್ಯಂತ ಪ್ರಮುಖ ಎನಿಸಿದ ರಕ್ಷಣಾ ಖಾತೆ ಜವಾಬ್ದಾರಿಯನ್ನು ನೀಡಿದರು.

ಸಾಮಾನ್ಯವಾಗಿ ರಕ್ಷಣಾ ಖಾತೆಯನ್ನು ಈವರೆಗೂ ಪುರುಷರೇ ನಿಭಾಯಿಸುತ್ತಿದ್ದರು. ಒಂದು ಬಾರಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಇದರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ವಿಶೇಷವೆಂದರೆ ಮಾಜಿ ಪ್ರಧಾನಿ ಇಂದಿರಾಗಾಂಧಿ ನಿಭಾಯಿಸಿದ್ದ ರಕ್ಷಣಾ ಮತ್ತು ಹಣಕಾಸು ಎರಡೂ ಖಾತೆಗಳ ಸಚಿವರಾಗಿರುವ ಏಕೈಕ ಮಹಿಳೆ ಎಂದರೆ ನಿರ್ಮಲಾಸೀತಾರಾಮನ್ ಮಾತ್ರ.

ರಕ್ಷಣಾ ಸಚಿವರಾಗಿದ್ದ ವೇಳೆ ಯುದ್ದೋಪಕರಣಗಳ ಖರೀದಿಯಲ್ಲಿ ತೋರಿಸಿದ ಪಾರದರ್ಶಕತೆ, ನೆರೆಹೊರೆಯ ರಾಷ್ಟ್ರಗಳ ಜೊತೆ ಸೌಹಾರ್ದ ಮಾತುಕತೆ ಭಾರತ ಮತ್ತು ಚೀನಾ ನಡುವೆ ಅರುಣಾಚಲಪ್ರದೇಶದ ಗಡಿಭಾಗದಲ್ಲಿ ಉಂಟಾದ ವಾತಾವರಣವನ್ನು ಯಶಸ್ವಿಯಾಗಿ ನಿಭಾಯಿಸಿದ್ದು, ನೆರೆಯ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳು, ಸೈನಿಕರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದು, ಆಧುನೀಕರಣಕ್ಕೆ ಆದ್ಯತೆ, ತಂತ್ರಜ್ಞಾನ ಅಳವಡಿಕೆ, ಸೇನೆ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರುವುದು ಸೇರಿದಂತೆ ಹತ್ತು ಹಲವು ಕ್ರಮಗಳು ಸರ್ಕಾರದ ಮೆಚ್ಚುಗೆಗೆ ಪಾತ್ರವಾದವು.

ಕೇಂದ್ರದಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಎನ್‍ಡಿಎ ಸರ್ಕಾರದಲ್ಲಿ ಹಿಂದಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಸಚಿವರಾಗಲು ನಿರಾಕರಿಸಿದರು. ಅಂತಹ ಸಂದರ್ಭದಲ್ಲಿ ಅತ್ಯಂತ ಮಹತ್ವದ ಖಾತೆಯಾಗಿರುವ ಹಣಕಾಸು ಇಲಾಖೆಯನ್ನು ಎಲ್ಲರಿಗೂ ಆಶ್ಚರ್ಯವಾಗುವಂತೆ ಮೋದಿ ನಿರ್ಮಲಾ ಸೀತಾರಾಮನ್ ಹೆಗಲಿಗೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ