ನವದೆಹಲಿ, ಜು.5- ಶಿಕ್ಷಣ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಲೋಕಸಭೆಯಲ್ಲಿಂದು 2019-20ನೆ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಅವರು, ಭಾರತದಲ್ಲಿ ವಿಶ್ವದರ್ಜೆ ಶಿಕ್ಷಣ ಸಂಸ್ಥೆಗಳನ್ನು ಒದಗಿಸಲು 400 ಕೊಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಭಾರತವು ಶೈಕ್ಷಣಿಕ ತಾಣವಾಗಿ ಹೊರಹೊಮ್ಮುವ ಅಗಾಧ ಸಾಮಥ್ರ್ಯ ಹೊಂದಿದೆ. ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಂಗ ಮಾಡಲು ಉತ್ತಮ ಪರಿಸರ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಅದೇ ರೀತಿ ಕ್ರೀಡಾ ಕ್ಷೇತ್ರಕ್ಕೂ ಉತ್ತೇಜನ ನೀಡಲಾಗುತ್ತಿದೆ. ಖೇಲೋ ಇಂಡಿಯಾ ಯೋಜನೆಯಡಿ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳು ಮತ್ತು ಅಮೂಲ್ಯ ಚಿಂತನೆಗಳನ್ನು ಯುವ ಜನಾಂಗಕ್ಕೆ ಮನವರಿಕೆ ಮಾಡಿಕೊಡಲು ಗಾಂಧಿ ಪೀಡಿಯಾ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮೀನುಗಾರಿಕೆ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಮತ್ತು ಆ ವಲಯದ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಮತ್ಸ್ಯ ಮೂಲ ಸೌಕರ್ಯಾಭಿವೃದ್ಧಿ ಯೋಜನೆಯನ್ನು ಆರಂಭಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.