ನವದೆಹಲಿ, ಜು.4- ಕಾಂಗ್ರೆಸ್ ಪಕ್ಷದ ಸ್ಥಾನಕ್ಕೆ ರಾಜಿನಾಮೆ ನೀಡಿರುವ ರಾಹುಲï ಗಾಂಧಿ ತಮ್ಮ ನಿರ್ಧಾರಕ್ಕೆ ಕಟಿಬದ್ಧರಾಗಿದ್ದು, ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೆ, ಟ್ವಿಟರ್ನಲ್ಲಿ ತಮ್ಮ ಅಧಿಕೃತ ಖಾತೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಪದಕೂಡ ಅಳಿಸಿ ಹಾಕಿದ್ದಾರೆ.
ಇನ್ನು ಮುಂದೆ ರಾಹುಲ್ ಅವರ ಟ್ವಿಟರ್ ಖಾತೆ ಅವರನ್ನು ಕಾಂಗ್ರೆಸ್ ಅಧ್ಯಕ್ಷರ ಬದಲಿಗೆ ಸಂಸದ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಸದಸ್ಯ ಎಂದಷ್ಟೇ ಪರಿಚಯಿಸುತ್ತದೆ.
ತಾವು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ. ಪಕ್ಷದ ಕಾರ್ಯಕಾರಿ ಸಮಿತಿ ಹೊಸ ಅಧ್ಯಕ್ಷರನ್ನು ನೇಮಿಸಬೇಕು ಎಂದು ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಎಂಬ ಹುದ್ದೆಯನ್ನು ನಿನ್ನೆ ತೆಗೆದುಹಾಕಿದ್ದಾರೆ.
ಇನ್ನು ಮುಂದೆ ಪಕ್ಷದ ಅಧ್ಯಕ್ಷನಲ್ಲ ಎಂದು ಸುದ್ದಿಗಾರರಿಗೆ ತಿಳಿಸಿರುವ ರಾಹುಲ್ ಗಾಂಧಿ, ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೂಡಲೇ ಸಭೆ ನಡೆಸಿ ಪಕ್ಷದ ಹೊಸ ಅಧ್ಯಕ್ಷರನ್ನು ನಿರ್ಧರಿಸುವಂತೆ ಮನವಿ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ರಾಹುಲ್ ಗಾಂಧಿ ಮನವೊಲಿಕೆಗೆ ಯತ್ನಿಸಿದ್ದ ಪಕ್ಷದ ಹಿರಿಯ ನಾಯಕರೆಲ್ಲರೂ ವಿಫಲರಾಗಿದ್ದು, ನೂತನ ಅಧ್ಯಕ್ಷರ ನೇಮಕವಾಗುವವರೆಗೂ ಅವರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರಲಿದ್ದಾರೆ ಎಂದು ಪಕ್ಷದ ಕಾರ್ಯಕಾರಿ ಸಮಿತಿ ತಿಳಿಸಿದೆ.