ವಿವಿಧ ಸ್ಪರ್ಧಾತ್ಮಕ ಪರೀಕ್ಷೆ-ಅಭ್ಯರ್ಥಿಗಳಿಗೆ ಡಿಜಿಟಲ್ ರೂಮ್ ತರಬೇತಿ ಕಾರ್ಯಕ್ರಮ

ಬೆಂಗಳೂರು, ಜು.5- ಬ್ರೆಟ್ ಸೊಲ್ಯುಶನ್ ಸಂಸ್ಥೆ ವತಿಯಿಂದ ಬ್ಯಾಂಕಿಂಗ್ ಹಣಕಾಸು ಸೇವೆಗಳು, ವಿಮೆ ಕ್ಷೇತ್ರಗಳ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಭ್ಯರ್ಥಿಗಳ ಅರಿವಿನ ಕೌಶಲ್ಯ ಅಭಿವೃದ್ಧಿ ಮತ್ತು ಸಾಮಥ್ರ್ಯ ವೃದ್ದಿಗಾಗಿ ಡಿಜಿಟಲ್ ರೂಮ್ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕಂಪನಿಯ ಅಧ್ಯಕ್ಷ ಬಿ.ಅಶೋಕ್ ಹೆಗ್ಡೆ ಮಾತನಾಡಿ ಬಿಎಫ್‍ಎಸ್‍ಐ ಮತ್ತು ಇತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಕರ್ನಾಟಕ ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಸರಿಯಾದ ತರಬೇತಿ ಅವಶ್ಯಕತೆಯಿದ್ದು ಅಭ್ಯರ್ಥಿಗಳಿಗೆ ತರಬೇತಿ ಅಗತ್ಯಗಳನ್ನು ಪೂರೈಸಲು ರಾಜ್ಯದ ವಿವಿಧ ಭಾಗಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿದ್ಧರಾಮಯ್ಯ ಮಾತನಾಡಿ ಬಹುದಿನಗಳ ಬೇಡಿಕೆಯಾಗಿದ್ದ ಗ್ರಾಮೀಣ ಬ್ಯಾಂಕ್ ಉದ್ಯೋಗಗಳಿಗೆ ನಡೆಸುವ ಪರೀಕ್ಷೆಗಳನ್ನು ಇನ್ನು ಮುಂದೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ ಎಂದರು.

ಬ್ಯಾಂಕ್ ಪರೀಕ್ಷೆಗಳನ್ನು ಎದುರಿಸಲು ತರಬೇತಿ ನೀಡುವ ಸಂಸ್ಥೆಗಳು ಕಡಿಮೆ. ಪ್ರಾಧಿಕಾರ ಉದ್ಯೋಗಕ್ಕೆ ಬೇಕಿರುವ ತರಬೇತಿ ನೀಡಲು ಯೋಚಿಸಿದ್ದು ಬ್ರೆಟ್ ಸೊಲ್ಯುಶನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ಈ ತರಬೇತಿ ನೀಡಲು ಮುಂದಾಗಿದೆ.

ಕರ್ನಾಟಕದ ಹಳ್ಳಿಗಾಡಿನ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಪ್ಲೀಕೇಶನ್ ಹಾಕುವ ವಿಧಾನವೂ ತಿಳಿದಿಲ್ಲ. ಅಂತಹದ್ದರಲ್ಲಿ ಆ ಮಕ್ಕಳಿಗೆ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಆತ್ಮಸ್ಥೈರ್ಯ ತುಂಬಲು ತರಬೇತಿ ನೀಡಲು ಮುಂದಾಗಿದ್ದು ಕನ್ನಡ ಮಕ್ಕಳಿಗೆ ಡಿಜಿಟಲ್ ಕ್ಲಾಸ್ ರೂಮ್ ಮೂಲಕ ಕನ್ನಡದಲ್ಲೂ ಸೂಕ್ತ ತರಬೇತಿ ನೀಡಲಾಗುವುದು ಎಂದು ಅಶೋಕ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ