ಸಿಹಿ-ಕಹಿ ಸಮ್ಮಿಶ್ರಣದ ಬಜೆಟ್

ನವದೆಹಲಿ,ಜು.5-ಜನಸಾಮಾನ್ಯರಿಗೆ ಹೊರೆಯಾಗದಂತೆ ತೆರಿಗೆಗಳನ್ನು ವಿಧಿಸದೆ, ಡೀಸೆಲ್-ಪೆಟ್ರೋಲ್ ಮೇಲಿನ ಸೆಸ್ ದರ ಹೆಚ್ಚಿಸಿ, ಐದು ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡಿ, ಉದ್ದಿಮೆದಾರರಿಗೆ ಭರಪೂರ ಕೊಡುಗೆಗಳನ್ನು ನೀಡಿ, ಚಿನ್ನದ ಮೇಲಿನ ಆಮದು ಸುಂಕ ಏರಿಕೆ ಮಾಡಿ ಕೃಷಿ, ಗ್ರಾಮೀಣಾಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಒತ್ತು, 60 ವರ್ಷ ಮೇಲ್ಪಟ್ಟವರಿಗೆ 3 ಸಾವಿರ ಪಿಂಚಣಿ ನೀಡುವ ಮೂಲಕ ಸಿಹಿ-ಕಹಿ ಸಮ್ಮಿಶ್ರಣದ ಬಜೆಟ್ ಇಂದು ಮಂಡನೆಯಾಗಿದೆ.

ಒಂದು ಕಡೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸದೆ ಜನಸಾಮಾನ್ಯರ ಹೃದಯ ಗೆಲ್ಲಲು ಮುಂದಾಗಿರುವ ಕೇಂದ್ರ ಸರ್ಕಾರ, ಮತ್ತೊಂದು ಕಡೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ದರವನ್ನು 1 ರೂ. ಏರಿಕೆ ಮಾಡುವ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದೆ. ಕುಸಿಯುತ್ತಿರುವ ಜಿಡಿಪಿ ದರವನ್ನು ಹೆಚ್ಚಳ ಮಾಡಲು ತೆರಿಗೆ ನೀತಿಯನ್ನು ಸರಳೀಕರಣಗೊಳಿಸಿ, ನಿರುದ್ಯೋಗ ನಿವಾರಿಸಲು ಹೊಸ ಉದ್ಯಮಗಳಿಗೆ ಬಂಡವಾಳ ಹೂಡಲು ಭರ್ಜರಿ ಕೊಡುವೆಗಳನ್ನು ನೀಡಲಾಗಿದೆ.

ಕೇಂದ್ರದಲ್ಲಿ 2ನೇ ಬಾರಿಗೆ ಅಭೂತಪೂರ್ವ ಬಹುಮತ ಪಡೆದು ಅಧಿಕಾರ ಹಿಡಿದಿರುವ ಎನ್‍ಡಿಎ ಸರ್ಕಾರದ ಬಹುನಿರೀಕ್ಷಿತ ಬಜೆಟ್‍ನ್ನು ಹಣಕಾಸು ಖಾತೆ ಹೊಂದಿರುವ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಿದರು.

ಕಾಯಕಯೋಗಿ ಬಸವಣ್ಣನವರ ವಚನ, ಚಾಣುಕ್ಯನ ತಂತ್ರ, ಉರ್ದುವಿನಲ್ಲಿ ಶಾಹಿರಿ ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್, ಸುದೀರ್ಘ ಎರಡು ಗಂಟೆಗಳ ಕಾಲ ಬಜೆಟ್ ಮಂಡನೆ ಮಾಡಿದರು.

ರಕ್ಷಣಾ ಸಾಮಾಗ್ರಿಗಳು, ಶಸ್ತ್ರ ಚಿಕಿತ್ಸೆ ಉಪಕರಣಗಳು, ಇಥಿಲಾನ್ ಚರ್ಮೋತ್ಪನ್ನ, ಪಾಮ್ ಆಯಿಲ್ ದರ ಮುಂದಿನ ದಿನಗಳಲ್ಲಿ ಇಳಿಕೆಯಾಗಲಿದೆ.

ಚಿನ್ನ, ಬೆಲೆ ಬಾಳುವ ಲೋಹ, ತಂಬಾಕು, ರಬ್ಬರ್, ಮಾರ್ಬಲ್, ಟೈಲ್ಸ್ ಆಟೋ ಬಿಡಿಭಾಗಗಳು, ಪಿವಿಸಿ ಪೈಪ್, ಒಎಸ್‍ಪಿ ಕೇಬಲ್, ಡಿಜೀಟಲ್ ಕ್ಯಾಮೆರಾ, ಗೋಡಂಬಿ, ಸೇರಿದಂತೆ ಮತ್ತಿತರ ಕೆಲವು ವಸ್ತುಗಳ ಶೀಘ್ರದಲ್ಲೇ ಬೆಲೆ ಏರಿಕೆಯಾಗಲಿವೆ.

ಐದು ಲಕ್ಷ ವಾರ್ಷಿಕ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯ್ತಿ ನೀಡಿ ಶ್ರೀಸಾಮಾನ್ಯರ ಮನವೊಲಿಸಲು ಕಸರತ್ತು ನಡೆಸಿರುವ ನಿರ್ಮಲಾ ಸೀತಾರಾಮನ್, ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆ ಸುಂಕವನ್ನು ಏರಿಕೆ ಮಾಡುವುದರ ಜೊತೆಗೆ ಬಂಗಾರ ಆಮದು ಸುಂಕವನ್ನು ಶೇ. 10ರಿಂದ 12.5 ಹೆಚ್ಚಿಸಿ ಆಭರಣ ಖರೀದಿದಾರರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ತೆರಿಗೆ ಪಾವತಿದಾರರಿಗೆ ವಿಶೇಷ ಒತ್ತು ಕೊಟ್ಟಿರುವ ಅವರು, 2ರಿಂದ 3 ಕೋಟಿ ವ್ಯವಹರಿಸುವವರಿಗೆ ಶೇಕಡ 5, 5ರಿಂದ 10 ಕೋಟಿ ವ್ಯವಹರಿಸುವವರಿಗೆ ಶೇಕಡ 7 ಹಾಗೂ 400 ಕೋಟಿ ಮೇಲ್ಪಟ್ಟು ವ್ಯವಹರಿಸುವವರಿಗೆ ಶೇ.25ರಷ್ಟು ತೆರಿಗೆ ವಿಧಿಸಿದ್ದಾರೆ.

ಇದೇ ವೇಳೆ ಎಲೆಕ್ಟ್ರಿಕಲ್ ವಾಹನ ಬಳಕೆದಾರರು ಮತ್ತು ಉತ್ಪಾದಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷ ಕೊಡುಗೆಗಳನ್ನು ಕೊಟ್ಟಿರುವುದು ಕಂಡುಬಂದಿದೆ.
1.25 ಲಕ್ಷವರೆಗಿನ ವಾಹನ ಖರೀದಿ ಮಾಡಿದರೆ ಸಬ್ಸಿಡಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ 5 ಲಕ್ಷ ಮೌಲ್ಯದ ಎಲೆಕ್ಟ್ರಿಕಲ್ ವಾಹನ ಉತ್ಪಾದಿಸಿದರೆ ಜಿಎಸ್‍ಟಿಯಿಂದ ವಿನಾಯ್ತಿ ನೀಡುವುದಾಗಿ ಪ್ರಕಟಿಸಿದರು.

ವಿದ್ಯುತ್ ವಾಹನಗಳ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ ಹಾಗೂ ನಿರ್ಧಿಷ್ಟ ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಸೀಮಾ ಸುಂಕವನ್ನು ಸಹ ಇಳಿಸಲಾಗಿದೆ.

45 ಲಕ್ಷವರೆಗಿನ ಮನೆ ಖರೀದಿಸಿದರೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದ್ದು, 7ಲಕ್ಷದವರೆಗಿನ ಸಾಲಕ್ಕೆ 15 ವರ್ಷ ತೆರಿಗೆ ವಿನಾಯ್ತಿಯನ್ನು ಘೋಷಿಸಲಾಗಿದೆ.

ಗ್ರಾಮೀಣ ಮತ್ತು ಕೃಷಿಗೆ ಒತ್ತು:
ಇನ್ನು ನಿರ್ಮಲಾ ಸೀತಾರಾಮನ್ ಬಜೆಟ್‍ನಲ್ಲಿ ಆದ್ಯತಾ ವಲಯಗಳಾದ ಕೃಷಿ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ವಸತಿ, ರಸ್ತೆಗಳ ನಿರ್ಮಾಣ, ವಿದ್ಯುತ್ ಪೂರೈಕೆ, ಶೌಚಾಲಯಗಳ ನಿರ್ಮಾಣ, ಆರೋಗ್ಯ ಸೇರಿದಂತೆ ಮತ್ತಿತರ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ವೃದ್ಧಿಯನ್ನು 5 ಟ್ರಿಲಿಯನ್(ಲಕ್ಷ ಕೋಟಿ) ಡಾಲರ್‍ಗೆ ಹೆಚ್ಚಿಸುವ ಹೆಗ್ಗುರಿ ಇಟ್ಟುಕೊಳ್ಳಲಾಗಿದೆ. ಆರ್ಥಿಕ ಸುಧಾರಣೆ- ಅಭಿವೃದ್ಧಿ ಮತ್ತು ರಾಷ್ಟ್ರದ ಸುರಕ್ಷತೆ, ಸದೃಢ ದೇಶ ಹಾಗೂ ಸದೃಢ ನಾಗರಿಕರು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

2022ರ ಅಂತ್ಯಕ್ಕೆ ದೇಶದಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ 1.95 ಕೋಟಿ ವಸತಿಗಳನ್ನು ನಿರ್ಮಾಣ ಮಾಡಲು ಗುರಿ ಇಟ್ಟುಕೊಳ್ಳಲಾಗಿದೆ. ಇನ್ನು ಮುಂದೆ ಮನೆ ನಿರ್ಮಿಸುವವರು ಕೇವಲ 114 ದಿನಗಳೊಳಗೆ (ಈ ಹಿಂದೆ 314 ದಿನಗಳ ಗಡವು ಇತ್ತು) ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಣೆ ಮಾಡಬೇಕು.

2022ರೊಳಗೆ ದೇಶದ ಪ್ರತಿಯೊಂದು ಮನೆಗೂ ವಿದ್ಯುತ್ ಪೂರೈಕೆ ಹಾಗೂ ಸೀಮೆಎಣ್ಣೆ ಬಳಕೆಯನ್ನು ಮುಕ್ತಗೊಳಿಸಲು ಎಲ್ಲರಿಗೂ ಎಲ್‍ಪಿಜಿ ಪೂರೈಕೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

ಎಲ್ಲರಿಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲು ಹರ್ ಘರ್ ಜಲ್ ಎಂಬ ವಿನೂತನ ಯೋಜನೆಯನ್ನು ಜಾರಿ ಮಾಡಲಾಗಿದೆ.ಸ್ವಚ್ಛ ಭಾರತ ಅಭಿಯಾನದಡಿ ಈವರೆಗೂ ದೇಶದೆಲ್ಲೆಡೆ 9.6 ಕೋಟಿ ಶೌಚಾಲಯಗಳ ನಿರ್ಮಾಣದ ಜೊತೆಗೆ ಪ್ರತಿ ಗ್ರಾಮದಲ್ಲೂ ಘನ ತ್ಯಾಜ್ಯ ನಿರ್ವಹಣೆಗಾಗಿ ಸ್ವಚ್ಛ ಭಾರತ ಯೋಜನೆ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ 30 ಸಾವಿರ ಕಿ.ಮೀ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಈ ಯೋಜನೆಯ 2ನೇ ಹಂತದಲ್ಲಿ 80,250 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 1.25 ಲಕ್ಷ ಕಿ.ಮೀ ರಸ್ತೆ ಮೇಲ್ದರ್ಜೆಗೇರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ನಾರಿಯಿಂದ ನಾರಾಯಣಿ:
ಈ ಬಾರಿಯ ಬಜೆಟ್‍ನಲ್ಲಿ ನಿರ್ಮಲಾ ಸೀತಾರಾಮನ್ ನಾರಿಯರ ಹೃದಯಕ್ಕೆ ಲಗ್ಗೆ ಇಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ ಎಂಬ ನಿರೀಕ್ಷೆ ದಿಟವಾಗಿದೆ.

ಪ್ರತಿ ಸ್ವಸಹಾಯ ಗುಂಪಿನಲ್ಲಿ ಒಬ್ಬ ಮಹಿಳೆ ಜನಧನ ಖಾತೆ ಹೊಂದಿದ್ದರೆ 5 ಸಾವಿರ ರೂ.ವರೆಗೆ ಓಡಿ ಸೌಲಭ್ಯ, ಅರ್ಹರಿಗೆ ಮುದ್ರಾ ಯೋಜನೆಯಡಿ ಒಂದು ಲಕ್ಷದವರೆಗೆ ಸಾಲ ನೀಡಲಾಗುವುದು.

ಮಹಿಳಾ ಸ್ವಸಹಾಯ ಸಂಘಗಳ ಬಡ್ಡಿ ಮತ್ತು ಬಡ್ಡಿ ವಿನಾಯ್ತಿ ಹಾಗೂ ಬಡ್ಡಿ ಪಾವತಿ ನೆರವು ಯೋಜನೆಯನ್ನು ದೇಶದ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಣೆ, ಮಹಿಳೆಯರ ಸುಧಾರಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಉದ್ಯಮಿಗಳಿಗೆ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೃಷಿ, ಕೈಗಾರಿಕೆ, ಹೋಟೆಲ್, ಸರಕು ಸೇರಿದಂತೆ ಮೊದಲಾದವುಗಳನ್ನು ಮಾರಾಟ ಮಾಡುವ ಸ್ಮಾರ್ಟ್‍ಅಪ್‍ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ.

ಯುವಕರಲ್ಲಿ ಸ್ಮಾರ್ಟಪ್ ಉದ್ದಿಮೆ ಆರಂಭಿಸಲು ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸಲಾಗುವುದು. ಇದರ ವಿನ್ಯಾಸ ಮತ್ತು ಕಲ್ಪನೆಯನ್ನು ಸ್ಮಾರ್ಟ್‍ಅಪ್ ಮುಖೇನ ರೂಪಿಸಲಾಗುವುದು.

ವಾರ್ಷಿಕವಾಗಿ ಒಂದೂವರೆ ಕೋಟಿ ಕಡಿಮೆ ವಹಿವಾಟು ನಡೆಸುವ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳು ಮತ್ತು ಅಂಗಡಿ ವರ್ತಕರಿಗೆ ಪಿಂಚಣಿ ಸೌಲಭ್ಯವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಈ ಪಿಂಚಣಿ ಸೌಲಭ್ಯವನ್ನು ಪಡೆಯಲು ಆಧಾರ್ ಹಾಗೂ ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು. 1.50 ಕೋಟಿ ಕಡಿಮೆ ಆದಾಯವುಳ್ಳ ವ್ಯಾಪಾರಿಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

ಇದಲ್ಲದೆ ಅಟಲ್ ಪಿಂಚಣಿ ಯೋಜನೆಯಡಿ ಸರ್ಕಾರದಿಂದ 60 ವಯಸ್ಸಿನ ಜನರಿಗೆ 1000, 2000, 3000, 4000 ಮತ್ತು 5000 ರೂ.ಗಳ ಕನಿಷ್ಟ ತಿಂಗಳ ಪಿಂಚಣಿ ಸಿಗಲಿದೆ.

ತಿಂಗಳಿಗೆ ಕೇವಲ 40 ರೂ. ಪಾವತಿ ಮಾಡಿ ಬ್ಯಾಂಕ್‍ಗಳಲ್ಲಿ ಹೆಸರು ನೊಂದಾಯಿಸಿಕೊಂಡರೆ 18 ವರ್ಷದಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಿಂದ 1000 ರೂ.ಪಿಂಚಣಿಯನ್ನು ಪಡೆಯಬಹುದಾಗಿದೆ.

ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿರುವ ನಿರ್ಮಲಾ ಸೀತಾರಾಮನ್, ರೈಲ್ವೆ ಸಮಗ್ರ ಅಭಿವೃದ್ದಿಗೆ 12 ವರ್ಷಗಳಲ್ಲಿ 50 ಲಕ್ಷ ಕೋಟಿ ಮೀಸಲಿಡಲು ತೀರ್ಮಾನಿಸಿದ್ದಾರೆ.

ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ವಿಮಾನ ಮಾದರಿಯ ಪ್ರಯಾಣಿಕರ ಅನುಭವವನ್ನು ರೈಲ್ವೆ ಸಾರಿಗೆಯಲ್ಲಿ ಒದಗಿಸಲು ಉದ್ದೇಶಿತ ಯೋಜನೆಯನ್ನು ಹಂತ ಹಂತವಾಗಿ ಜಾರಿ ಮಾಡುವುದಾಗಿ ತಿಳಿಸಿದ್ದಾರೆ.

ಮೆಟ್ರೋ ರೈಲು ಜಾಲವನ್ನು ವಿಸ್ತರಿಸಲು ಸಹ ಉದ್ದೇಶಿಸಲಾಗಿದೆ. ಈಗ ದೇಶಾದ್ಯಂತ 567 ಕಿ.ಮೀ ಮೆಟ್ರೋ ರೈಲು ಕಾರ್ಯಾರಂಭ ಮಾಡಿದೆ. ಇದೇ ವರ್ಷ ದೇಶದ ಎಲ್ಲ ರೈಲು ನಿಲ್ದಾನಗಳನ್ನು ಆಧುನೀಕರಣ ಮತ್ತು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ