ಬೆಂಗಳೂರು,ಜು.5- ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತಷ್ಟು ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಬಿಜೆಪಿ ನಿರೀಕ್ಷೆ ಹುಸಿಯಾಗಿದೆ. ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಪತನದ ಭೀತಿಯಿಂದ ನಿರಾಳವಾಗಿದೆ.
ಅಮವಾಸ್ಯೆ ಕಳೆದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ. ಆಗ ಮೈತ್ರಿ ಸರಕಾರದ ಸಂಖ್ಯಾಬಲ ಅಲ್ಪ ಮೊತ್ತಕ್ಕೆ ಕುಸಿದು ಸರ್ಕಾರದ ಭವಿಷ್ಯಕ್ಕೆ ಕುತ್ತು ಬರಲಿದೆ ಎಂದು ಭಾವಿಸಲಾಗಿತ್ತು.
ಆದರೆ, ದೋಸ್ತಿಗಳ ಪ್ರತಿ ತಂತ್ರದ ಪರಿಣಾಮ ಶಾಸಕರೂ ರಾಜೀನಾಮೆ ಕೊಡದಿರುವುದರಿಂದ ಮೈತ್ರಿ ನಾಯಕರು ಯಾವುದೇ ಭೀತಿ ಇಲ್ಲದೆ ನಿಶ್ಚಿಂತೆಯಲ್ಲಿದ್ದಾರೆ.
ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿದ ತಕ್ಷಣ ಅವರ ಆಪ್ತ ಶಾಸಕ ಮಹೇಶ್ ಕುಮಟಳ್ಳಿ, ಶ್ರೀಮಂತಪಾಟೀಲ್, ಪ್ರತಾಪ್ ಗೌಡ ಪಾಟೀಲ್, ನಾಗೇಂದ್ರ ಮತ್ತಿತರ ಶಾಸಕರು ರಾಜೀನಾಮೆ ನೀಡಲಿದ್ದಾರೆಂದು ಹೇಳಲಾಗಿತ್ತು.
ಮಂಗಳವಾರ ಒಂದು ದಿನ ಬೆಳಿಗ್ಗೆ ಶಾಸಕ ಆನಂದ್ ಸಿಂಗ್ ಹಾಗೂ ಮಧ್ಯಾಹ್ನ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆಯೇ ಎಂಬ ಆತಂಕಕ್ಕೊಳಗಾಗಿದ್ದರು.
ಸರ್ಕಾರ ಉಳಿಸಿಕೊಳ್ಳಲು ಆಪರೇಷನ್ ಕಮಲಕ್ಕೆ ಪ್ರತಿ ತಂತ್ರ ಹೆಣೆಯುತ್ತಿದ್ದರು.
ಕಳೆದ ಮೂರು ದಿನಗಳ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದರೆ ಸದ್ಯಕ್ಕೆ ಅತೃಪ್ತ ಶಾಸಕರು ರಾಜೀನಾಮೆ ನೀಡುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯ ಎದುರಾಗುವ ಸಾಧ್ಯತೆಗಳೂ ಕಾಣುತ್ತಿಲ್ಲ ಎಂದು ಹೇಳಲಾಗುತ್ತಿದೆ.