ಬೆಂಗಳೂರು, ಜು.5-ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ 8ರಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡಲು ಅಗ್ರಿಗೋಲ್ಡ್ ಗ್ರಾಹಕರ ಮತ್ತು ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಕೆ. ನಾಗಭೂಷಣರಾವ್ ಮಾತನಾಡಿ, ಜು. 8 ರಂದು ಬೆಳಗ್ಗೆ 10 ಗಂಟೆಗೆ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಅಗ್ರಿಗೋಲ್ಡ್ ಗ್ರಾಹಕರು ಮತ್ತು ಏಜೆಂಟ್ರೂ ಸಹಸ್ರಾರು ಸಂಖ್ಯೆಯಲ್ಲಿ ಮೆರವಣಿಗೆಯ ಮೂಲಕ ಸ್ವಾತಂತ್ರ್ಯ ಉದ್ಯಾಯನದವರೆಗೆ ತಲುಪಿ ಅಲ್ಲಿ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಅಗ್ರಿಗೋಲ್ಡ್ ಗ್ರಾಹಕರಿಗೆ ಶೀಘ್ರ ಪರಿಹಾರ ದೊರಕಿಸಿಕೂಡಲು ನಮ್ಮ ರಾಜ್ಯ ಸರ್ಕಾರವು ಆಂದ್ರಪ್ರದೇಶದ ಸರ್ಕಾರದೊಂದಿಗೆ ಸಂಪರ್ಕಿಸಿ ಎರಡು ರಾಜ್ಯಗಳ ಮುಖ್ಯ ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿಯೊಂದನ್ನು ರಚಿಸಬೇಕು. 50ಸಾವಿರ ಕ್ಕಿಂತಲು ಒಳಗೆ ಹಣವನ್ನು ಠೇವಣಿ ಇಟ್ಟಿರುವ ಬಡ ಗ್ರಾಹಕರ ನೆರವಿಗಾಗಿ ರಾಜ್ಯ ಸರ್ಕಾರವು ಕನಿಷ್ಠ 700ಕೋಟಿಯನ್ನ ಬಿಡುಗಡೆ ಮಾಡಿ ಗ್ರಾಹಕರಿಗೆ ಹಂಚಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಸಂಸ್ಥೆಯ ವಂಚನೆ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದಾಗಿ ತಿಳಿಸಿದರು.