ಆರ್‌ಎಸ್‌ಎಸ್ ಕೇಸ್ : ನ್ಯಾಯಾಲಯಕ್ಕೆ ರಾಹುಲ್ ಹಾಜರ್, ಜಾಮೀನು ಮಂಜೂರು

ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಆರ್‌ಎಸ್‌ಎಸ್ ಹೂಡಿದ್ದ ಮಾನನಷ್ಟ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಮುಂಬೈನ ಶಿವಡಿ ಕೋರ್ಟ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಜಾಮೀನು ನೀಡಿದೆ. 15 ಸಾವಿರ ರೂ. ಬಾಂಡ್, ಓರ್ವ ವ್ಯಕ್ತಿ ಶ್ಯೂರಿಟಿ ನೀಡಬೇಕೆಂದು ಕೋರ್ಟ್ ಷರತ್ತು ವಿಧಿಸಿದ್ದು, ಮಾಜಿ ಸಂಸದ ಏಕನಾಥ್ ಗಾಯಕ್‍ವಾಡ್ ರಾಹುಲ್ ಗಾಂಧಿ ಅವರಿಗೆ ಶ್ಯೂರಿಟಿ ನೀಡಿದ್ದಾರೆ.

ಆರ್‌ಎಸ್‌ಎಸ್ ಸ್ವಯಂ ಸೇವಕ ಮತ್ತು ವಕೀಲ ಧ್ರುತಿಮಾನ್ ಜೋಷಿ ಅವರು ರಾಹುಲ್ ಗಾಂಧಿ ಹಾಗೂ ಸಿಪಿಎ ಮುಖಂಡ ಸೀತಾರಾಮ್ ಯೆಚೂರಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈನ ಮಝ್ ಗೌನ್ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಳೆದ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ಮತ್ತು ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆ ವೇಳೆ ರಾಹುಲ್ ಗಾಂಧಿ ಈ ಪ್ರಕರಣದಲ್ಲಿ ನನ್ನನ್ನು ದೋಷಿಯನ್ನಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿಕೊಂಡರು.

ಜಾಮೀನು ಪಡೆದ ಬಳಿಕ ಮಾತನಾಡಿದ ರಾಹುಲ್ ಗಾಂಧಿ ಅವರು, ಇದು ಸಿದ್ಧಾಂತಗಳ ಮಧ್ಯೆ ಉಂಟಾದ ಯುದ್ಧ. ನಾನು ಬಡವರು, ರೈತರೊಂದಿಗೆ ನಿಲ್ಲುತ್ತೇನೆ. ಹೀಗಾಗಿ ದಾಳಿಗಳು ನಡೆಯುತ್ತಿವೆ. ನಾನು ಹೋರಾಟವನ್ನು ಆನಂದಿಸಿದ್ದೇನೆ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಕಳೆದ 5 ವರ್ಷಕ್ಕಿಂತ 10 ಪಟ್ಟು ಹೋರಾಟ ಹೆಚ್ಚಾಗುತ್ತದೆ ಎಂದರು.

ಏನಿದು ಪ್ರಕರಣ?:
ಧ್ರುತಿಮಾನ್ ಜೋಷಿ ಅವರು 2017ರಲ್ಲಿ ಕುರ್ಲಾ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಕ್ರಿಮಿನಲ್ ಕೇಸ್ ದಾಖಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಅವರು, ಗೌರಿ ಲಂಕೇಶ್ 2017ರ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರಿನ ತಮ್ಮ ನಿವಾಸದ ಹೊರಗೆ ರಾತ್ರಿ ವೇಳೆ ಗುಂಡೇಟಿಗೆ ಹತ್ಯೆಯಾಗಿದ್ದರು. ಆದರೆ ಯಾವುದೇ ಸಾಕ್ಷ್ಯಗಳನ್ನು ನೀಡದೇ ತನಿಖೆ ಪೂರ್ಣಗೊಳ್ಳದೇ ಗೌರಿ ಲಂಕೇಶ್ ಹತ್ಯೆಯನ್ನು ಬಲಪಂಥೀಯ ಸಂಘಟನೆ ನಡೆಸಿದೆ ಎಂದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಸೀತಾರಾಮ್ ಯೆಚೂರಿ ಹೇಳಿಕೆ ನೀಡಿದ್ದಾರೆ. ಇದರಿಂದ ಆರ್‍ಎಸ್‍ಎಸ್ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ದೂರಿದ್ದರು.

ನಾಯಕರ ಈ ಆರೋಪಗಳಿಂದ ನನ್ನ ಸ್ನೇಹಿತರು ನಿಮ್ಮ ನಿಮ್ಮ ಸಂಘಟನೆಯ ಸಿದ್ಧಾಂತಗಳಿಂದ ಹತ್ಯೆ ನಡೆದಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರಿಂದಾಗಿ ವೈಯಕ್ತಿಕವಾಗಿ ನನಗೆ ಬೇಸರವಾಗಿದೆ ಎಂದು ಧ್ರುತಿಮಾನ್ ಜೋಷಿ ತಿಳಿಸಿದ್ದರು.

ಗೌರಿ ಲಂಕೇಶ್ ಹತ್ಯೆಯಾದ 24 ಗಂಟೆಗಳೊಳಗೆ ರಾಹುಲ್ ಗಾಂಧಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ, ಆರ್‌ಎಸ್‌ಎಸ್ನ ತತ್ವ, ಸಿದ್ಧಾಂತಗಳಿಗೆ ವಿರುದ್ಧವಾಗಿ ಮಾತನಾಡುವವರ ಮೇಲೆ ಒತ್ತಡ, ಬೆದರಿಕೆ ಹಾಕಿ ಹೊಡೆದು, ದಾಳಿ ಮಾಡಿ ಕೊಲ್ಲಲಾಗುತ್ತದೆ ಎಂದು ಹೇಳಿದ್ದರು. ಇತ್ತ ಸೀತಾರಾಮ್ ಯೆಚೂರಿ ಅವರು, ಆರ್‌ಎಸ್‌ಎಸ್ ಸಿದ್ಧಾಂತ ಪಾಲಿಸುವವರು ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಗೌರಿ ಲಂಕೇಶ್ ಹತ್ಯೆ ಮಾಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ