ಬೆಂಗಳೂರು,ಜು.4- ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಕುಮಕ್ಕಿನಿಂದಲೇ ಆಪರೇಷನ್ ಕಮಲ ನಡೆಯುತ್ತದೆ ಎಂಬ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮೊದಲು ನಿಮ್ಮ ತಟ್ಟೆಯಲ್ಲಿ ಎಷ್ಟು ಹೆಗ್ಗಣ ಬಿದ್ದಿವೆ ಎಂಬುದನ್ನು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದೆ.
ಮೊದಲು ಬಿಜೆಪಿಯವರಿಗೆ ಸಿದ್ದರಾಮಯ್ಯನವರು ಭಗವದ್ಗೀತೆ ಹೇಳುವುದನ್ನು ನಿಲ್ಲಿಸಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದನ್ನು ನೋಡಿಕೊಳ್ಳಿ ನಮಗೆ ನಂತರ ಸಿದ್ದರಾಮಯ್ಯನವರು ಉಪದೇಶ ಮಾಡಲಿ ಎಂದು ವಿದಾನಪರಿಷತ್ ಸದಸ್ಯ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾವ ಆಪರೇಷನ್ ಕಮಲವನ್ನು ನಡೆಸುತ್ತಿಲ್ಲ. ಯಾರಿಗೂ ಇಂಜೆಕ್ಷನೂ ಕೊಡುತ್ತಿಲ್ಲ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಆಧಾರರಹಿತ ಆರೋಪ ಮಾಡುತ್ತಾರೆ. ಸಿದ್ದರಾಮಯ್ಯನವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ಟೀಕಾ ಪ್ರಹಾರ ನಡಸಿದರು.
ನನಗೆ ಬಿಜೆಪಿಯವರಿಂದ 40 ಕೋಟಿ ರೂ. ಆಫರ್ ಬಂದಿತ್ತು ಎಂದು ಪಿರಿಯಾಪಟ್ಟಣ ಶಾಸಕ ಮಹದೇವು ಹೇಳಿದ್ದಾರೆ. ಇಷ್ಟು ದಿನಗಳ ಕಾಲ ಈ ವಿಷಯವನ್ನು ಏಕೆ ಬಹಿರಂಗಪಡಿಸಿರಲಿಲ್ಲ. ನೀವು ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಪಂಚತಾರಾ ಹೋಟೆಲ್ನಲ್ಲಿ ಊಟ ಮಾಡುತ್ತಾ ಕುಳಿತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಗೊಂದಲದಿಂದ ಶಾಸಕರು ಅಸಮಾಧಾನಗೊಂಡು ರಾಜೀನಾಮೆ ನೀಡುತ್ತಿದ್ದಾರೆ. ಅದಕ್ಕೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆಪರೇಷನ್ ಕಮಲ ಎನ್ನುವವರು ಮೊದಲು ನಿಮ್ಮ ಮನೆಯನ್ನು ಸರಿ ಮಾಡಿಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡಿ ಎಂದು ತಿರುಗೇಟು ಕೊಟ್ಟರು.
ಮೈತ್ರಿ ಸರ್ಕಾರ ತನ್ನ ಆಂತರಿಕ ಕಚ್ಚಾಟದಿಂದಲೇ ಬಿದ್ದು ಹೋಗುತ್ತದೆ. ನಾವು ಯಾವ ಆಪರೇಷನ್ಕಮಲವನ್ನು ನಡೆಸಬೇಕಾದ ಅಗತ್ಯವೂ ಇಲ್ಲ. ಅಧಿಕೃತ ವಿರೋಧ ಪಕ್ಷವಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಬಿದ್ದು ಹೋದ ಮೇಲೆ ನಮ್ಮ ನಡೆ ಏನೆಂಬುದನ್ನು ರಾಜ್ಯಾಧ್ಯಕ್ಷರು ಮತ್ತು ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.
ಶನಿವಾರ ಚಾಲನೆ:
ಇನ್ನು ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಶನಿವಾರ ಪ್ರಧಾನಿ ನರೇಂದ್ರಮೋದಿಯವರು ವಾರಣಾಸಿಯಲ್ಲಿ ಚಾಲನೆ ಕೊಡುವರು. ಅದೇ ರೀತಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ತೆಲಂಗಾಣದಲ್ಲಿ, ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರು ಕರ್ನಾಟಕದಲ್ಲಿ ಉದ್ಘಾಟನೆ ಮಾಡುವರು ಎಂದು ಮಾಹಿತಿ ನೀಡಿದರು.
ನಾವು ಗೆಲ್ಲದೆ ಇರುವ ಹಾಗೂ ಪಕ್ಷದ ಸಂಘಟನೆ ಹಿನ್ನಡೆ ಅನುಭವಿಸುತ್ತಿರುವ ಕಡೆಗಳಲ್ಲಿ ಹೆಚ್ಚು ಸದಸ್ಯತ್ವ ಅಭಿಯಾನ ನಡೆಸಬೇಕೆಂದು ಗುರಿ ಹೊಂದಿದ್ದೇವೆ. 15 ಸಾವಿರ ವಿಸ್ತರಕರು, 5 ಲಕ್ಷ ಜನ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ, 50 ಸಾವಿರ ಮಂದಿಗೆ ಹೊಸದಾಗಿ ಸದಸ್ಯತ್ವ ನೀಡಲಾಗುವುದು ಎಂದು ತಿಳಿಸಿದರು.