![Kota Srinivas Poojary 27 nov 2015 1](http://kannada.vartamitra.com/wp-content/uploads/2018/06/Kota-Srinivas-Poojary-27-nov-2015-1-281x381.jpg)
ಬೆಂಗಳೂರು,ಜು.4-ರಾಜ್ಯದ 6000ಕ್ಕೂ ಹೆಚ್ಚು ಗ್ರಾಪಂ ಗ್ರಂಥಾಲಯಗಳ ಮೇಲ್ವಿಚಾರಕರ ಕನಿಷ್ಠ ವೇತನ ವಿಚಾರದಲ್ಲಿ ಸರ್ಕಾರ, ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಸದನದ ಹೊರ-ಒಳಗೆ ಹೋರಾಟ ನಡೆಸುವುದಾಗಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯರ ನಿಯೋಗದೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿರುವ 6000ಕ್ಕೂ ಹೆಚ್ಚು ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರಿಗೆ 13,200 ರೂ. ಕನಿಷ್ಠ ವೇತನ ಪಾವತಿಸಬೇಕೆಂದು ಸರ್ಕಾರಿ ಆದೇಶವಾಗಿದ್ದರೂ ಅವರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ.
ವಿಧಾನಮಂಡಲದ ಅಧಿವೇಶನಕ್ಕೂ ಮುನ್ನ ಗ್ರಾಪಂ ಗ್ರಂಥಪಾಲಕರ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ನಿಗದಿ ಮಾಡಿದ ಕನಿಷ್ಠ ವೇತನ ಪಾವತಿಗೆ ಆದೇಶ ನೀಡಬೇಕು, ಒಂದು ವೇಳೆ ಅಧಿವೇಶನಕ್ಕೂ ಮುನ್ನ ಸರ್ಕಾರ ತನ್ನ ನಿರ್ಧಾರ ಪ್ರಕಟಿಸದಿದ್ದರೆ ಸದನದ ಒಳ-ಹೊರಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಿದ್ದಗೊಂಡಿರುವ ಪದವೀಧರ ಶಾಲಾ ಶಿಕ್ಷಕರನ್ನು 6ರಿಂದ 8ನೇ ವರ್ಗಕ್ಕೆ ವಿಲೀನಗೊಳಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಸಚಿವರು ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕನಿಷ್ಠ ವೇತನ ಕುರಿತಂತೆ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಅವರ ಭರವಸೆಯ ಮೇಲೆ ವಿಶ್ವಾಸವಿದೆ ಎಂದರು.
ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ತೆರಳಿದ್ದ ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯರಾದ ವಿ.ಎಸ್.ಸುಂಕನಾಲಾ, ಅ.ದೇವೆಗೌಡ, ಅರುಣ್ ಶಹಪುರ, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಎಂ.ಪಿ.ಸುನೀಲ್ ಸುಬ್ರಹ್ಮಣ್ಯ ಇದ್ದರು.