ಬೆಂಗಳೂರು; ನಗರದಲ್ಲಿ ಕ್ರೈಂ ರೇಟ್ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇನ್ನೂ ಸರಗಳ್ಳತನವಂತೂ ಎಲ್ಲಾ ಕಡೆಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಬುಧವಾರ ಸರಗಳ್ಳರ ಕ್ರೌಯಕ್ಕೆ ವೃದ್ಧೆಯೊಬ್ಬರು ಚಿಂತಾಜನಕ ಸ್ಥಿತಿಗೆ ತಲುಪಿರುವ ಘಟನೆಗೆ ಪ್ರತಿಷ್ಠಿತ ಜಯನಗರ ಬಡಾವಣೆ ಸಾಕ್ಷಿಯಾಗಿದೆ.
ಬೆಂಗಳೂರಿನ ಜಯನಗರ ಪ್ರತಿಷ್ಠಿತ ಬಡಾವಣೆಗಳಲ್ಲೊಂದು. ಇಲ್ಲಿನ 10ನೇ ಬ್ಲಾಕ್ನ ರಂಗೋಲಿ ಶೋರೂಮ್ ಬಳಿ ಇಂದು ಬೆಳಗ್ಗೆ 63 ವರ್ಷ ವೃದ್ಧೆ ದೇವಾಲಯಕ್ಕೆ ತೆರಳಿ ಮನೆಗೆ ವಾಪಾಸ್ ಬರುತ್ತಿದ್ದರು. ಈ ವೇಳೆ ಕೆಟಿಎಂ ಬೈಕ್ನಲ್ಲಿ ಬಂದ ಇಬ್ಬರು ಆಗಂತುಕರು ಚಿನ್ನದ ಸರ ಕದಿಯುವ ರಭಸದಲ್ಲಿ ವೃದ್ಧೆಯನ್ನು ನೆಲದ ಮೇಲೆ ಎಸೆದು ಬಿಸಾಕಿದ್ದಾರೆ. ಇದರಿಂದ ತೀವ್ರ ಗಾಯಕ್ಕೆ ಒಳಗಾಗಿರುವ ಸಂತ್ರಸ್ಥೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿನ್ನದ ಸರಕ್ಕಾಗಿ ಆಗಂತುಕರು ವೃದ್ಧೆಯನ್ನು ನೆಲದ ಮೇಲೆ ಎಳೆದು ಬಿಸಾಕಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಇದರ ಆಧಾರದ ಮೇಲೆ ಜಯನಗರ ಪೊಲೀಸರು ಸರಗಳ್ಳರ ಸೆರೆಗೆ ಬಲೆ ಬೀಸಿದ್ದಾರೆ. ಆದರೆ, ಈ ಸರಗಳ್ಳರು ತಮ್ಮ ಹೇಯ ಕೃತ್ಯಕ್ಕೆ ವೃದ್ಧೆಯರನ್ನೇ ಟಾರ್ಗೆಟ್ ಮಾಡುತ್ತಿದ್ದು ಇಂತಹ ಹೀನ ಕೃತ್ಯಗಳಿಗೆ ಅಂತ್ಯ ಎಂದು ಎಂಬುದು ಮಾತ್ರ ಉತ್ತರವಿಲ್ಲದ ಪ್ರಶ್ನೆ ಎಂಬಂತಾಗಿದೆ.