ನವದೆಹಲಿ,ಜು.2- ಲೋಕಸಭೆಯಲ್ಲಿಂದು ಪ್ರಥಮ ಬಾರಿಗೆ ಮಾತನಾಡಿದ ಮಂಡ್ಯ ಸಂಸದೆ ಮತ್ತು ಅಭಿನೇತ್ರಿ ಸುಮಲತಾ ತಮ್ಮ ಕ್ಷೇತ್ರದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಕನ್ನಡದಲ್ಲೇ ಮಾತನಾಡಿ ಗಮನಸೆಳೆದ ಸುಮಲತಾ, ಮುಂಗಾರುಮಳೆ ಕೊರತೆಯಿಂದಾಗಿ ಮಂಡ್ಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ನೀರಿಲ್ಲದೆ ಕೃಷಿಕರ ಬೆಳೆಗಳು ಒಣಗಿ ನಷ್ಟ ಉಂಟಾಗುತ್ತಿದೆ ಎಂದರು.
ಮಂಡ್ಯ ರೈತರ ಬೆಳೆಗಳಿಗೆ ಈ ಕೂಡಲೇ ನೀರು ಹರಿಸಬೇಕು, ಜಲಸಂಕಷ್ಟ ನಿವಾರಿಸಲು ಸರ್ಕಾರ ಕೂಡಲೇ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಬರ ಪರಿಸ್ಥಿತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸುಮಲತಾ, ಇದರಿಂದ ರೈತರು ಸಾಲ ತೀರಿಸಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳು ಬರ ಪರಿಸ್ಥಿತಿಗೆ ತುತ್ತಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆಯಾಗಿಲ್ಲ. ಬರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಇದನ್ನು ನಿಭಾಯಿಸಲು ಎಲ್ಲರೂ ಒಗ್ಗೂಡಬೇಕೆಂದು ಸಲಹೆ ಮಾಡಿದ ಸುಮಲತಾ, ಜೈ ಜವಾನ್, ಜೈ ಕಿಸಾನ್ ಘೋಷಣೆ ಮೂಲಕ ತಮ್ಮ ಭಾಷಣವನ್ನು ಅಂತ್ಯಗೊಳಿಸಿದರು.