ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಬೆನ್ನಲ್ಲೇ ರಾಜೀನಾಮೆ ನೀಡಿದ್ದ ಇನ್ನೋರ್ವ ಕೈ ಶಾಸಕ ರಮೇಶ್ ಜಾರಕಿಹೊಳಿ ಈಗೆಲ್ಲಿದ್ದಾರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಿನ್ನೆ ಸಂಜೆ ರಾಜೀನಾಮೆ ನೀಡಿದ ಬಳಿಕ ನವದೆಹಲಿಗೆ ತೆರಳಿರುವ ರಮೇಶ್ ಜಾರಕಿಹೊಳಿ ಇನ್ನೂ ನಾಲ್ಕೈದು ದಿನ ಬೆಂಗಳೂರಿಗೆ ಬರುವುದಿಲ್ಲ.
ಹಠಾತ್ತನೆ ದೆಹಲಿಗೆ ತೆರಳಿರುವ ರಮೇಶ್ ಜಾರಕಿಹೊಳಿ ಬಿಜೆಪಿ ರಾಷ್ಟ್ರೀಯ ನಾಯಕರೊಬ್ಬರ ಸಂಪರ್ಕದಲ್ಲಿದ್ದಾರಾ? ಎಂಬ ಅನುಮಾನ ಕಾಡುತ್ತಿದೆ. ಸ್ಪೀಕರ್ ಅವರನ್ನು ಭೇಟಿಯಾಗಲು ಜಾರಕಿಹೊಳಿ ಬಂದರೆ ಬರಬಹುದು. ಇಲ್ಲವಾದರೆ ಇನ್ನೂ ನಾಲ್ಕೈದು ದಿನ ದೆಹಲಿ ಅಥವಾ ಮುಂಬೈನಲ್ಲಿ ಠಿಕಾಣಿ ಹೂಡಲು ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಜ್ಯ ಕೈ ನಾಯಕರ ಸಂಪರ್ಕದಿಂದ ದೂರ ಉಳಿಯಲು ಅವರು ಈ ರೀತಿ ಮಾಡಲಿದ್ದಾರೆ ಎನ್ನಲಾಗಿದೆ.
ತಮ್ಮ ಬೆಂಬಲಿಗ ಶಾಸಕರಿಂದ ರಾಜೀನಾಮೆ ಕೊಡಿಸುವ ಪ್ಲ್ಯಾನ್ ರೂಪಿಸುತ್ತಿರುವ ರಮೇಶ್ ಜಾರಕಿಹೊಳಿ ಬೆಂಗಳೂರಿನಿಂದ ಹೊರಗಿದ್ದುಕೊಂಡೇ ತಂತ್ರ ಹೆಣೆಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂಬೈಗೆ ಬೆಂಬಲಿಗ ಹಾಗೂ ಅತೃಪ್ತ ಶಾಸಕರನ್ನುಕರೆಸಿಕೊಳ್ಳಲು ರಮೇಶ್ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ನಿನ್ನೆ ಮುಂಜಾನೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಮೈತ್ರಿ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಿದ್ದರು.
ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ಅತೃಪ್ತ ಶಾಸಕರಲ್ಲಿ ಪ್ರಮುಖರಾದ ರಮೇಶ್ ಜಾರಕಿಹೊಳಿ ಕೂಡ ರಾಜೀನಾಮೆ ನೀಡಿದ್ದರು. ಇನ್ನೂ ಐದಾರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್- ಜೆಡಿಎಸ್ ಆಪರೇಷನ್ ಕಮಲವನ್ನು ಹತ್ತಿಕ್ಕಲು ಸರ್ಕಸ್ ಮಾಡುತ್ತಿವೆ.