ನವದೆಹಲಿ, ಜು.2- ದರ್ಪ, ದವಲತ್ತು, ಉದ್ಧಟತನ ಮತ್ತು ದುರ್ನಡತೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಜನಪ್ರತಿನಿಧಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಬಿಜೆಪಿ ಹಿರಿಯ ನಾಯಕ ಆಕಾಶ್ ವಿಜಯ್ ವರ್ಗಿಯ ಅವರ ಪುತ್ರ ಸರ್ಕಾರಿ ಅಧಿಕಾರಿಯೊಬ್ಬರನ್ನು ಕ್ರಿಕೆಟ್ ಬ್ಯಾಟ್‍ನಿಂದ ಥಳಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಂಸದರು ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದರು.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನ್ಯಾಯದ ಮುಂದೆ ಎಲ್ಲರೂ ಸಮಾನರು. ನಾಯಕರಿರಲಿ ಅಥವಾ ಅವರ ಮಕ್ಕಳಿರಲಿ ಇಲ್ಲವೆ ಇನ್ನಾರೇ ಆಗಿರಲಿ ದರ್ಪ, ದುರ್ನಡತೆ ತೋರಿದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಗಂಭೀರ ಎಚ್ಚರಿಕೆ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.
ಇಂತಹ ವರ್ತನೆಗಳಿಂದ ಪಕ್ಷದ ವರ್ಚಸ್ಸು ಮತ್ತು ಹೆಸರಿಗೆ ಕಳಂಕ ಬರುತ್ತದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಜನಪ್ರತಿನಿಧಿಗಳಿಗೆ ಮೋದಿ ನಿಷ್ಠೂರವಾಗಿ ಎಚ್ಚರಿಕೆ ನೀಡಿದರು.
ಜು.6ರಿಂದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಬಿಜೆಪಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜು.6ರಿಂದ ರಾಷ್ಟ್ರವ್ಯಾಪಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಿಂದ ಅವರು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ದೇಶಾದ್ಯಂತ ಪ್ರತಿ ಬೂತ್‍ಗಳಲ್ಲಿ ಕನಿಷ್ಟ ಐದು ಸಸಿಗಳನ್ನು ನೆಡುವಂತೆಯೂ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಎರಡನೆ ಬಾರಿ ಅಧಿಕಾರ ಗದ್ದುಗೆಗೇರಿರುವ ಭಾರತೀಯ ಜನತಾ ಪಕ್ಷದ ಪ್ರಥಮ ಸಂಸದೀಯ ಪಕ್ಷದ ಸಭೆ ದೆಹಲಿಯಲ್ಲಿಂದು ನಡೆಯಿತು.
ಬಿಜೆಪಿಯ ಸುಮಾರು 380 ಸಂಸದರು ಈ ಸಭೆಯಲ್ಲಿ ಭಾಗವಹಿಸಿದ್ದರು.ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪ್ರಚಂಡ ಗೆಲುವಿಗೆ ಕಾರಣರಾದ ಪ್ರಧಾನಿ ಮೋದಿ ಮತ್ತು ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಸಂಸದೀಯ ಮಂಡಳಿ ಸಭೆಯಲ್ಲಿ ಅಭಿನಂದಿಸಲಾಯಿತು.
ಬಿಜೆಪಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಜೆ.ಪಿ.ನಡ್ಡಾ ಅವರಿಗೂ ಸಹ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಜುಲೈ 6ರಿಂದ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ ಬಿಜೆಪಿಯ ಸದಸ್ಯತ್ವ ಆರಂಭಿಸಲಿದ್ದಾರೆ.ಅದೇ ದಿನ ಅಮಿತ್ ಷಾ ತೆಲಂಗಾಣದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.ಪಕ್ಷದ ಮುಖಂಡರುಗಳು ದೇಶದ ವಿವಿಧ ನಗರಗಳಿಂದ ಹೊಸ ಸದಸ್ಯತ್ವ ನೋಂದಣಿ ಆಂದೋಲನ ಪ್ರಾರಂಭಿಸಲಿದ್ದಾರೆ ಎಂದರು.
ಬಿಜೆಪಿ ಸಂಸದರನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು ತಮ್ಮ ವರ್ಚಸ್ಸು ಮತ್ತು ಹೆಸರಿಗೆ ಕುಂದುಂಟಾಗದಂತೆ ಎಲ್ಲ ಚುನಾಯಿತ ಪ್ರತಿನಿಧಿಗಳು ಸಮರ್ಥವಾಗಿ ಜನ ಹಿತಾಸಕ್ತಿಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿರುವುದಾಗಿ ಜೋಷಿ ವಿವರಿಸಿದರು.
ಸಂಸತ್ ಕಲಾಪಗಳಲ್ಲಿ ಪಕ್ಷದ ಸದಸ್ಯರೆಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು.ದೇಶದ ಹಿತಾಸಕ್ತಿ ಮತ್ತು ರಾಷ್ಟ್ರದ ಜನತೆಯ ಹಿತರಕ್ಷಣೆಗೆ ಪೂರಕವಾದ ವಿಷಯಗಳನ್ನು ಪ್ರಸ್ತಾಪಿಸಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಗಳ ಮೂಲಕ ಪಕ್ಷದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸುವಂತೆ ಪ್ರಧಾನಿ ಅವರು ಕರೆ ನೀಡಿದರು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿಯನ್ನು ರಾಷ್ಟ್ರಾದ್ಯಂತ ಮತ್ತಷ್ಟು ಬಲವರ್ಧನೆಗೊಳಿಸುವುದರ ಜತೆಗೆ ಸಂಸದರು ಅನುಸರಿಸಬೇಕಾದ ಕರ್ತವ್ಯಗಳು ಮತ್ತು ಕಾರ್ಯಗಳ ಬಗ್ಗೆ ಮೋದಿ ಸಭೆಯಲ್ಲಿ ಸಲಹೆ ಮಾಡಿದರು ಎಂದು ಜೋಷಿ ವಿವರಿಸಿದರು.