ಬೆಂಗಳೂರು, ಜು.2-ಈ ತಿಂಗಳ ಅಂತ್ಯದೊಳಗೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ನಾಯಕರೇ ಅಖಾಡಕ್ಕೆ ದುಮುಕಿದ್ದಾರೆ.
ರಾಜ್ಯ ನಾಯಕರ ಮೇಲೆ ಕೆಲವು ಭಿನ್ನಮತೀಯ ಶಾಸಕರು ವಿಶ್ವಾಸ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರೊಬ್ಬರ ಉಸ್ತುವಾರಿಯಲ್ಲೇ ಆಪರೇಷನ್ ಕಮಲ ನಡೆಯುತ್ತಿದೆ.
ರಾಜ್ಯದ ಯಾವುದೇ ನಾಯಕರು ಈ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸ್ಪಷ್ಟ ಸೂಚನೆ ಕೊಡಲಾಗಿದ್ದು, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾವುದೇ ನಾಯಕರಿಗೂ ಮಾಹಿತಿ ಸಿಗದಂತೆ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ.
ಅಮೆರಿಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ವದೇಶಕ್ಕೆ ಹಿಂತಿರುಗುವುದರೊಳಗೆ ಕನಿಷ್ಠ 13ರಿಂದ 15 ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಲು ಬಿಜೆಪಿ ತೆರೆಮರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಈ ಹಿಂದೆ ಪದೇ ಪದೇ ಆಪರೇಷನ್ ಕಮಲ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ನಾಯಕರ ಮೇಲೆ ವಿಶ್ವಾಸ ಇಟ್ಟುಕೊಳ್ಳದೆ ರಾಷ್ಟ್ರೀಯ ನಾಯಕರೇ ಮೊದಲ ಬಾರಿಗೆ ರಂಗ ಪ್ರವೇಶ ಮಾಡಿದ್ದಾರೆ.
ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡುವಂತೆ ಹಿಂದೆ ರಾಜ್ಯ ನಾಯಕರಿಗೆ ಸೂಚನೆ ಕೊಡಲಾಗಿತ್ತು. ಆದರೆ, ಆಪರೇಷನ್ ಕಮಲ ಯಶಸ್ವಿಯಾಗದೆ ಬಿಜೆಪಿಯ ಮಾನ ಹರಾಜಾಗಿತ್ತು.
ಇದು ರಾಜ್ಯ ನಾಯಕರಿಂದ ಸಾಧ್ಯವಾಗದ ಮಾತು ಎಂಬುದನ್ನು ಮನಗಂಡ ರಾಷ್ಟ್ರೀಯ ನಾಯಕರು ಅತೃಪ್ತ ಶಾಸಕರ ಜತೆ ಸಂಪರ್ಕ ಸಾಧಿಸಿ ಹಂತ ಹಂತವಾಗಿ ರಾಜೀನಾಮೆ ಕೊಡಿಸಿ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿದ್ದಾರೆ.
ಶುಕ್ರವಾರದೊಳಗೆ ಕನಿಷ್ಠ 15 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಇದೇ 12ರಿಂದ ಆರಂಭವಾಗುವ ಅಧಿವೇಶನ ಸಂದರ್ಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಇದೆ.
ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಭಿನ್ನಮತೀಯ ಶಾಸಕರ ಜತೆ ಸಂಪರ್ಕ ಸಾಧಿಸಿರುವ ರಾಷ್ಟ್ರೀಯ ಬಿಜೆಪಿ ನಾಯಕರು ತಮ್ಮ ನಿರ್ದೇಶನ ಬರುವವರೆಗೂ ರಾಜೀನಾಮೆ ನೀಡಬಾರದು ಎಂದು ಸೂಚನೆ ಕೊಟ್ಟಿದ್ದರು.
ಭಾನುವಾರ ದೆಹಲಿಯಲ್ಲಿ ಇಬ್ಬರು ಪ್ರಮುಖ ಸಚಿವರನ್ನು ಭೇಟಿಯಾದ ಭಿನ್ನಮತೀಯ ನಾಯಕರೊಬ್ಬರು ಮಾತುಕತೆ ನಡೆಸಿ ನಂತರ ರಾಜೀನಾಮೆ ಕೊಟ್ಟಿದ್ದಾರೆ.
ಜುಲೈನಲ್ಲಿ ಸರ್ಕಾರ ರಚಿಸಿ:
ಈ ತಿಂಗಳ ಅಂತ್ಯದೊಳಗೆ ಕರ್ನಾಟಕದಲ್ಲಿ ಸರ್ಕಾರ ರಚನೆಯಾಗಲೇಬೇಕೆಂದು ಪಟ್ಟು ಹಿಡಿದಿರುವ ಬಿಜೆಪಿ ನಾಯಕರು ಅದಕ್ಕಾಗಿ ಬೇಕಾದ ಸಿದ್ಧತೆಯನ್ನು ಕೈಗೊಂಡಿದ್ದಾರೆ.
ಒಂದು ವೇಳೆ 15ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಕೊಟ್ಟರೆ ರಾಜ್ಯದಲ್ಲಿ ತಕ್ಷಣವೇ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದ್ದು, ಸರ್ಕಾರ ಬಹುಮತ ಕಳೆದುಕೊಳ್ಳಲಿದೆ. ತಕ್ಷಣವೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರ ಮೂಲಕ ಒತ್ತಡ ಹಾಕಿಸುವ ಕಾರ್ಯ ತಂತ್ರವನ್ನು ರೂಪಿಸಲಾಗಿದೆ.
ಹಾಗೊಂದು ವೇಳೆ ಬಿಜೆಪಿಗೆ ಅಧಿಕಾರ ಸಿಗಲೇಬಾರದೆಂದು ವಿಧಾನಸಭೆ ವಿಸರ್ಜನೆ ಮಾಡುವ ಕ್ರಮಕ್ಕೆ ಮುಂದಾದರೆ ರಾಜ್ಯಪಾಲರ ಮೂಲಕ ಅದನ್ನು ತಡೆಹಿಡಿದು ಸರ್ಕಾರದ ನಿರ್ಣಯವನ್ನು ತಿರಸ್ಕರಿಸುವಂತೆ ಒತ್ತಡ ಹಾಕಬೇಕೆಂಬ ಅಭಿಪ್ರಾಯವೂ ಕೇಳಿ ಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ರೀತಿ ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇಡಲಾಯಿತೋ ಅದೇ ರೀತಿ ಸಾಂವಿಧಾನಿಕ ಬಿಕ್ಕಟ್ಟು ನೆಪ ಹೇಳಿ ಕರ್ನಾಟಕದಲ್ಲೂ ವಿಧಾನಸಭೆಯನ್ನು ಅಮಾತನತ್ತಿನಲ್ಲಿಡುವ ಲೆಕ್ಕಾಚಾರವೂ ಬಿಜೆಪಿ ನಾಯಕರಲ್ಲಿದೆ.
ಬಳಿಕ ಕೆಲವು ಶಾಸಕರಿಂದ ರಾಜೀನಾಮೆ ಕೊಡಿಸಿ ಸರ್ಕಾರ ರಚಿಸುವ ದೂರದೃಷ್ಟಿಯನ್ನು ಬಿಜೆಪಿ ಹಾಕೊಂಡಿದೆ.
ಇವೆಲ್ಲವೂ ಭಿನ್ನಮತೀಯ ಶಾಸಕರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ಅವಲಂಬಿತವಾಗಿದೆ.