ಬೆಂಗಳೂರು, ಜು.2-ಕಾಂಗ್ರೆಸ್ನ ಇಬ್ಬರು ಶಾಸಕರು ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ವಿದೇಶಿ ಪ್ರವಾಸ ಕೈಗೊಂಡಿರುವುದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ 10 ದಿನಗಳ ಕಾಲ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಯತ್ನಿಸಿದ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಂಪರ್ಕಕ್ಕೆ ಸಿಗದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಪರಿಸ್ಥಿತಿ ಉಲ್ಬಣಿಸಿರುವ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರು ಕೇಂದ್ರ ಸ್ಥಾನದಲ್ಲಿದ್ದು, ಅತೃಪ್ತರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು.
ಅದನ್ನು ಬಿಟ್ಟು ಜವಾಬ್ದಾರಿಯಿಂದ ನುಣುಚಿಕೊಂಡು ಪರಾರಿಯಾಗುವುದು ಸರಿಯಲ್ಲ ಎಂದು ವೇಣುಗೋಪಾಲ್ ಕಿಡಿಕಾರಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ನ ಸಮ್ಮಿಶ್ರ ಸರ್ಕಾರ ಉಳಿಯಲೇಬೇಕು. ಇದು ಕಾಂಗ್ರೆಸ್ನ ಹೈಕಮಾಂಡ್ನ ದೃಢ ನಿರ್ಧಾರ. ರಾಜ್ಯ ನಾಯಕರು ತಮ್ಮ ವೈಯಕ್ತಿಕ ಕಾರಣಕ್ಕಾಗಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತಂದರೆ ಅದನ್ನು ಹೈಕಮಾಂಡ್ ಸಹಿಸುವುದಿಲ್ಲ. ಕೂಡಲೇ ದಿನೇಶ್ಗುಂಡೂರಾವ್ ಅವರಿಗೆ ನನ್ನನ್ನು ಸಂಪರ್ಕಿಸಲು ಹೇಳಿ ಎಂದು ವೇಣುಗೋಪಾಲ್ ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ದಿನೇಶ್ಗುಂಡೂರಾವ್ ಅವರ ವಿದೇಶಿ ಪ್ರವಾಸವನ್ನು ಸಮರ್ಥಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸಿದರಾದರೂ ಅದಕ್ಕೆ ಅವಕಾಶ ಕೊಡದೆ ಸಿಡಿಮಿಡಿಗೊಂಡ ವೇಣುಗೋಪಾಲ್ ಅವರು ಪಕ್ಷದ ನೇತೃತ್ವ ವಹಿಸಿದವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಸುಗಮವಾಗಿ ನಡೆಯಲು ಸಹಕರಿಸಬೇಕು. ಅದನ್ನು ಬಿಟ್ಟು ವಿದೇಶದಲ್ಲಿ ಹೋಗಿ ಕುಳಿತರೆ ಇಲ್ಲಿ ಪರಿಸ್ಥಿತಿ ನಿಭಾಯಿಸುವವರು ಯಾರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.