ಕೊಯಮತ್ತೂರು,ಜು.2- ಭಾರತೀಯ ವಾಯುಪಡೆಗೆ ತೇಜಸ್ ಫೈಟರ್‍ಜೆಟ್‍ನಿಂದ 1200 ಲೀಟರ್ ಇಂಧನ ಸಾಮಥ್ರ್ಯದ ಫ್ಯೂಯಲ್ ಟ್ಯಾಂಕ್ ಇಂದು ಮುಂಜಾನೆ ಇಲ್ಲಿನ ಕೃಷಿ ಭೂಮಿಯೊಂದರ ಮೇಲೆ ಕಳಚಿಬಿದ್ದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ದೈನಂದಿನ ಹಾರಾಟದ ಅಭ್ಯಾಸದಲ್ಲಿ ತೊಡಗಿದ್ದ ತೇಜಸ್ ಯುದ್ಧ ವಿಮಾನದಿಂದ ಇಂಧನ ಟ್ಯಾಂಕ್ ಕಳಚಿಬಿದ್ದಿದೆ. ಇದರಿಂದ ಯಾವುದೇ ತೊಂದರೆಯಾಗಿಲ್ಲ. ಯಾರಿಗೂ ಅಪಾಯವಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕೊಯಮತ್ತೂರಿನ ಇರಗೂರ್ ಗ್ರಾಮದ ರೈತರು ಮುಂಜಾನೆ ದೈನಂದಿನ ಕೃಷಿ ಚಟುವಟಿಕೆಗಾಗಿ ಹೊಲದತ್ತ ಧಾವಿಸುತ್ತಿದ್ದಾಗ ಆಗಸದಿಂದ ಯಾವುದೋ ವಸ್ತು ರಭಸವಾಗಿ ಬಿದ್ದಿದ್ದನ್ನು ಗಮನಿಸಿ ಕೆಲಕಾಲ ಆತಂಕಕ್ಕೊಳಗಾಗಿದ್ದರು.
ಇಂಧನ ಟ್ಯಾಂಕ್ ಕಳಚಿ ಬಿದ್ದ ರಭಸಕ್ಕೆ ಹೊಲದಲ್ಲಿ ಮೂರು ಅಡಿಗಳಷ್ಟು ಗುಂಡಿ ಬಿದ್ದು ಅಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಐಎಎಫ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಂತರ ಇದು ತೇಜಸ್ ಫೈಟರ್‍ಜೆಟ್‍ನ 1200 ಲೀಟರ್ ಸಾಮಥ್ರ್ಯದ ಪೆಟ್ರೋಲ್ ಟ್ಯಾಂಕ್ ಎಂಬುದು ದೃಢಪಟ್ಟಿತು.
ಆಕಸ್ಮಿಕವಾಗಿ ಫ್ಯೂಲ್ ಟ್ಯಾಂಕ್ ಹೊಲದ ಮೇಲೆ ಬಿದ್ದ ನಂತರ ಇದರ ಅರಿವು ಇಲ್ಲದೆ ಯುದ್ಧ ವಿಮಾನ ಹತ್ತಿರದ ಸುಲೂರು ವಾಯುನೆಲೆಯಲ್ಲಿ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು.
ಆಗಸದಿಂದ ಹಠಾತ್ತಾನೆ ಇಂಧನ ಟ್ಯಾಂಕ್ ಕಳಚಿಬಿದ್ದ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.