ಬೆಂಗಳೂರು, ಜು.1-ಕೆಲವರಿಗೆ ಹೊಟ್ಟೆ ನೋವಿರುತ್ತದೆ, ಅದಕ್ಕೆ ಸರಿಯಾದ ಔಷಧಿ ಕೊಡಿಸಿ ಸರಿ ಮಾಡೋಣ. ಯಾರೇ ರಾಜೀನಾಮೆ ಕೊಟ್ಟರೂ ಸರ್ಕಾರಕ್ಕೆ ಅಪಾಯ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಯಾವ ಶಾಸಕರಿಗೂ ಚುನಾವಣೆ ಬೇಕಿಲ್ಲ. ಖಾಸಗಿಯಾಗಿ ಬಿಜೆಪಿ ಶಾಸಕರು ನಮ್ಮ ಬಳಿ ಏನೆಲ್ಲ ಮಾತನಾಡಿದ್ದಾರೆ ಎಂದು ನಾನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಯಾರೋ ಒಂದಿಬ್ಬರು ರಾಜೀನಾಮೆ ಕೊಟ್ಟ ತಕ್ಷಣ ಸರ್ಕಾರ ಪತನವಾಗುವುದಿಲ್ಲ ಎಂದು ಹೇಳಿದರು.
ನಿನ್ನೆ ನನಗೆ ಹೊಟ್ಟೆ ನೋವು ಬಂದಿತ್ತು.ಡಾಕ್ಟರ್ ಬಳಿ ಹೋಗಿ ಔಷಧಿ ಪಡೆದು ಈಗ ಸರಿಮಾಡಿಕೊಂಡಿದ್ದೇನೆ. ಅದೇ ರೀತಿ ಕೆಲವರಿಗೆ ಹೊಟ್ಟೆನೋವು ಬಂದಿರುತ್ತೆ, ಸರಿಯಾದ ಔಷಧಿ ಕೊಡಿಸಿ ಸರಿ ಮಾಡೋಣ ಎಂದು ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.