ಬೆಂಗಳೂರು, ಜು.1-ಶಾಸಕ ಆನಂದ್ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇನ್ನೂ ಕೆಲವು ಶಾಸಕರು ಶೀಘ್ರದಲ್ಲೇ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ನಾವು ಯಾವುದೇ ಶಾಸಕರನ್ನು ಬಿಜೆಪಿಗೆ ಬರುವಂತೆ ಆಹ್ವಾನಿಸಿಲ್ಲ. ಅಸಮಾಧಾನಗೊಂಡಿರುವ ಶಾಸಕರು ರಾಜೀನಾಮೆ ನೀಡಿದರೆ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಈ ಸರ್ಕಾರದಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾಗಿದ್ದು, ಬಹುತೇಕರು ರಾಜೀನಾಮೆ ನೀಡಿ ಹೊರಬರಲಿದ್ದಾರೆ ಎಂದು ಸುದ್ದಿವಾಹಿನಿಗೆ ತಿಳಿಸಿದರು.
ಬಳ್ಳಾರಿಯಲ್ಲಿ ಅಸಮಾಧಾನಗೊಂಡಿದ್ದ ಶಾಸಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾನು ಈ ಜಿಲ್ಲೆಯಿಂದಲೇ ರಾಜೀನಾಮೆ ಪರ್ವ ಆರಂಭವಾಗುತ್ತದೆ ಎಂದು ಹೇಳಿದ್ದೆ.ಕಾಂಗ್ರೆಸ್-ಜೆಡಿಎಸ್ನಲ್ಲಿರುವ ಅನೇಕ ಶಾಸಕರು ನನ್ನ ಬಳಿ ನೋವು ತೋಡಿಕೊಂಡಿದ್ದರು. ಹಾಗಾಗಿ ಮೈತ್ರಿ ಸರ್ಕಾರದ ಪತನ ಬಳ್ಳಾರಿಯಿಂದಲೇ ಪ್ರಾರಂಭವಾಗಲಿದೆ ಎಂದು ಹೇಳಿದ್ದೆ ಸಮರ್ಥಿಸಿಕೊಂಡರು.
ಕಾಂಗ್ರೆಸ್-ಜೆಡಿಎಸ್ ನಾಯಕರು ಆಪರೇಷನ್ ಕಮಲ ಎನ್ನಲಿ ಅಥವಾ ಇನ್ನೇನೇ ಅನ್ನಲಿ. ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷದ ತತ್ವಸಿದ್ದಾಂತ ನಾಯಕತ್ವವನ್ನು ಒಪ್ಪಿಕೊಂಡು ಬಂದರೆ ಯಾರನ್ನೇ ಆಗಲಿ ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಿದೆ ಎಂದು ಹೇಳಿದರು.
ಸರ್ಕಾರ ಅಸ್ತಿತ್ವದಲ್ಲಿದೆ ಎಂಬುದೇ ಜನರಿಗೆ ತಿಳಿಯುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಅಧಿಕಾರದಲ್ಲಿ ಮುಂದುವರೆಯಬೇಕು. ಕ್ಷೇತ್ರದಲ್ಲಿ ಯಾವ ಕೆಲಸಗಳೂ ನಡೆಯುತ್ತಿಲ್ಲ. ಸರ್ಕಾರದಲ್ಲೂ ಸ್ಥಾನಮಾನ ಸಿಗುತ್ತಿಲ್ಲ ಎಂದು ಅನೇಕರು ಅಸಮಾಧಾನಗೊಂಡಿದ್ದಾರೆ. ಕೆಲವು ದಿನಗಳವರೆಗೆ ಕಾದು ನೋಡಿ ಎಂದು ಈಶ್ವರಪ್ಪ ಇನ್ನಷ್ಟು ಕುತೂಹಲ ಹೆಚ್ಚಿಸಿದರು.
ಆನಂದ್ಸಿಂಗ್ ರಾಜೀನಾಮೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಯಾವ ಕಾರಣಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ ಎಂಬ ನನಗೂ ತಿಳಿದಿಲ್ಲ. ಜಿಂದಾಲ್ ಕಂಪನಿಗೆ ಜಮೀನು ಪರಭಾರೆ ಮಾಡಿರುವುದಕ್ಕೆ ಅಸಮಾಧಾನಗೊಂಡಿದ್ದರು. ಉಳಿದ ಮಾಹಿತಿ ನನ್ನ ಬಳಿ ಇಲ್ಲ ಎಂದು ಸ್ಪಷ್ಟಪಡಿಸಿದರು.