ಬೆಂಗಳೂರು, ಜು.1- ಶಾಸಕ ಆನಂದ್ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆ ಸಮ್ಮಿಶ್ರ ಸರ್ಕಾರದ ಅಸ್ಥಿತ್ವದ ಬಗ್ಗೆ ಚರ್ಚೆ ಆರಂಭವಾಗಿ ನಂಬರ್ ಗೇಮ್ಗಳ ತಾಕಲಾಟಗಳು ನಡೆದಿವೆ.
ಒಟ್ಟು 224 ಚುನಾಯಿತ ಶಾಸಕರ ಕರ್ನಾಟಕ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 113 ಶಾಸಕರ ಸಂಖ್ಯಾಬಲ ಬೇಕು.ಸದ್ಯಕ್ಕೆ ಕಾಂಗ್ರೆಸ್ 78, ಜೆಡಿಎಸ್ 37 ಸೇರಿ ಎರಡೂ ಪಕ್ಷಗಳು 115 ಸಂಖ್ಯಾಬಲ ಹೊಂದಿವೆ.
ಬಿಎಸ್ಪಿಯ ಮಹೇಶ್, ಕೆಪಿಜೆಪಿಯ ಎನ್.ಶಂಕರ್, ಮುಳಬಾಗಿಲಿನ ಪಕ್ಷೇತರ ಶಾಸಕ ಆರ್.ನಾಗೇಶ್ ಈ ಮೂವರು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಒಟ್ಟು ಸಂಖ್ಯಾಬಲ 118 ಇದೆ. ಸ್ಪೀಕರ್ ರಮೇಶ್ಕುಮಾರ್ ಒಳಗೊಂಡಂತೆ ಸಮ್ಮಿಶ್ರ ಸರ್ಕಾರದ ಬಲಾಬಲ ಈವರೆಗೂ 119 ಇತ್ತು.
ಇಂದು ಶಾಸಕ ಆನಂದ್ಸಿಂಗ್ ರಾಜೀನಾಮೆ ನೀಡಿದ್ದು, ಒಂದು ವೇಳೆ ಅದು ಅಂಗೀಕಾರವಾದರೆ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 118ಕ್ಕೆ ಕುಸಿಯಲಿದೆ.
ಬಿಜೆಪಿ 105 ಶಾಸಕರನ್ನು ಹೊಂದಿದ್ದು, ಪಕ್ಷೇತರರಾಗಿರುವ ಮೂರು ಮಂದಿ ಯಾವ ಕ್ಷಣದಲ್ಲಿ ಯಾವಾಗ ಬೇಕಾದರೂ ತಮ್ಮ ನಿಷ್ಠೆಯನ್ನು ಬದಲಿಸುವ ಸಾಧ್ಯತೆ ಇದ್ದು, ಅವರ ಬೆಂಬಲವನ್ನು ಬಿಜೆಪಿ ಪಡೆದಿದ್ದೇಯಾದರೆ 108 ಸಂಖ್ಯಾ ಬಲ ಬರಲಿದೆ.
ಸರ್ಕಾರ ರಚನೆಗೆ ಸದ್ಯಕ್ಕೆ ಈ ಸಂಖ್ಯೆ ಬಿಜೆಪಿಗೆ ಸಾಲುವುದಿಲ್ಲ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಪಾಳಯದ ಶಾಸಕರಿಂದ ರಾಜೀನಾಮೆ ಕೊಡಿಸಿ ವಿಧಾನಸಭೆಯ ಒಟ್ಟು ಸಂಖ್ಯಾಬಲವನ್ನು ಕುಸಿಯುವಂತೆ ಮಾಡುವುದು ಬಿಜೆಪಿಯ ಲೆಕ್ಕಾಚಾರ.
ಆನಂದ್ಸಿಂಗ್ ಸೇರಿದಂತೆ ಇನ್ನೂ 10ರಿಂದ 13 ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳಿವೆ. ಇನ್ನು 9 ಮಂದಿ ಶಾಸಕರು ರಾಜೀನಾಮೆ ಕೊಟ್ಟರೆ ಸಹಜವಾಗಿ ವಿಧಾನಸಭೆಯ ಬಲಾಬಲ 215ಕ್ಕೆ ಕುಸಿಯಲಿದೆ. ಆಗ ಬಿಜೆಪಿಗೆ ಸರ್ಕಾರ ರಚಿಸಲು ತನ್ನ ಬಳಿ ಇರುವ 108 ಶಾಸಕರ ಸಂಖ್ಯೆಯೇ ಸಾಕಾಗಲಿದೆ.
ನಾಯಕರ ನಿರಾಸಕ್ತಿ:
ಈಗಾಗಲೇ ಕಾಂಗ್ರೆಸ್ ತನ್ನ ಪಕ್ಷದ ಶಾಸಕರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದು, ಅತೃಪ್ತರನ್ನು ಸಮಾಧಾನಪಡಿಸಲು ನಿರ್ದಿಷ್ಟ ನಾಯಕತ್ವವೇ ಇಲ್ಲದಂತಾಗಿದೆ.
ಶಾಸಕ ರೋಷನ್ಬೇಗ್ ಅವರನ್ನು ಅಮಾನತುಗೊಳಿಸಲಾಗಿದೆ. ಸಚಿವರ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕಾಗಿ ಶಾಸಕ ಭೀಮಾನಾಯಕ್ಗೆ ನೋಟಿಸ್ ನೀಡಲಾಗಿದೆ. ಈ ಹಿಂದೆ ಶಾಸಕ ಗಣೇಶ್ ಅವರನ್ನೂ ಕೂಡ ಅಮಾನತು ಮಾಡಲಾಗಿದ್ದು, ಸರ್ಕಾರದ ಅಸ್ತಿತ್ವಕ್ಕೆ ಆಧಾರ ಸ್ತಂಭಗಳಾದ ಶಾಸಕರಿಗೆ ಛಾಟಿ ಬೀಸುವ ಮೂಲಕ ಕಾಂಗ್ರೆಸ್ ಸೌಹಾರ್ದ ಪರಿಸ್ಥಿತಿಯನ್ನು ಹಾಳು ಮಾಡಿಕೊಂಡಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇತ್ತೀಚಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದು, ಒಂದು ವೇಳೆ ಸರ್ಕಾರ ಹೋದರೆ ಹೋಗಲಿ ಎಂಬ ಧೋರಣೆಯಲ್ಲಿದ್ದಾರೆ.
ಕಾಂಗ್ರೆಸ್ ಶಾಸಕರು ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅಥವಾ ಸಚಿವ ಡಿ.ಕೆ.ಶಿವಕುಮಾರ್ ಅವರ ಮಾತುಗಳನ್ನು ಮಾತ್ರ ಕೇಳುವ ಸಾಧ್ಯತೆಗಳಿವೆ. ಉಳಿದಂತೆ ಯಾವ ನಾಯಕರ ಸಂಧಾನಕ್ಕೂ ಅತೃಪ್ತರು ಜಗ್ಗುವುದಿಲ್ಲ.
ಈ ಇಬ್ಬರು ನಾಯಕರ ಪೈಕಿ ಸಿದ್ದರಾಮಯ್ಯ ಅವರು ಸರ್ಕಾರದ ಅಸ್ತಿತ್ವ ಹೋದರೆ ಅದಕ್ಕೆ ತಾವು ಹೊಣೆಯಲ್ಲ ಎಂಬ ಧೋರಣೆಯಲ್ಲಿ ಮಾತನಾಡುತ್ತಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ಸೂಚನೆ ನೀಡಿದ್ದೇ ಆದರೆ ಕೊನೆ ಕ್ಷಣದಲ್ಲಿ ಅಖಾಡಕ್ಕಿಳಿದು ಶಾಸಕರ ಜತೆ ಸಂಧಾನ ಮಾಡಬಹುದು.ಇಲ್ಲದೇ ಹೋದರೆ ಅವರೂ ಕೂಡ ತಟಸ್ಥರಾಗಿ ಉಳಿಯುವ ಸಾಧ್ಯತೆ ಇದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿದ್ದು, ರಾಜಕೀಯವಾಗಿ ನಡೆದಿರುವ ಕ್ಷಿಪ್ರ ಬೆಳವಣಿಗೆಗಳು ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆತರುವ ಸಾಧ್ಯತೆ ಇದೆ.