ಬೆಂಗಳೂರು, ಜು.1-ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 3667 ಎಕರೆ ಭೂಮಿಯನ್ನು ಜಿಂದಾಲ್ಗೆ ಶುದ್ಧ ಕ್ರಯಪತ್ರ ಮಾಡಿಕೊಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಶಾಸಕ ಆನಂದ್ಸಿಂಗ್ ಸಂಪುಟದ ಉಪಸಮಿತಿ ಸದಸ್ಯರಿಗೆ ಏಳು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ.
ಜೂ.27 ರಂದು ಸಂಪುಟದ ಉಪಸಮಿತಿಯ ಅಧ್ಯಕ್ಷರಾದ ಎಂ.ಬಿ.ಪಾಟೀಲ್, ಸದಸ್ಯ ಸಚಿವರಾದ ಬಂಡೆಪ್ಪ ಕಾಶಂಪುರ್, ಕೃಷ್ಣಭೆರೇಗೌಡ, ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿರುವ ಆನಂದ್ಸಿಂಗ್, ನಾನು ಸರ್ಕಾರದ ನಿರ್ಧಾರವನ್ನಾಗಲೀ ಅಥವಾ ಕಾರ್ಖಾನೆಯನ್ನಾಗಲೀ ವಿರೋಧಿಸುತ್ತಿಲ್ಲ. ಜಿಲ್ಲೆಯ ರೈತರ ಭವಿಷ್ಯದ ಹಿತದೃಷ್ಟಿಯಿಂದ ವಿರೋಧ ಮಾಡುತ್ತಿದ್ದೇನೆ.
ಹಿಂದೆ ಗಣಿಗಾರಿಕೆಯಿಂದ ಬಳ್ಳಾರಿ ಜಿಲ್ಲೆ ನಲುಗಿ ಹೋಗಿತ್ತು.ಜೆಎಸ್ಡಬ್ಲ್ಯು ಸ್ಟೀಲ್ ಲಿಮಿಟೆಡ್ ಕಂಪನಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡುತ್ತೇವೆ. ಸಿಎಸ್ಆರ್ ನಿಧಿ ಮೂಲಕ ಅಭಿವೃದ್ಧಿ ಮಾಡುತ್ತೇವೆ ಎಂದು ನಂಬಿಸಿ ಹಲವಾರು ಸವಲತ್ತುಗಳನ್ನು ಪಡೆದುಕೊಳ್ಳುತ್ತಿದೆ.ಅವಕಾಶವಾದಿತನ ಅನುಸರಿಸುತ್ತಿರುವ ಜಿಂದಾಲ್ ಕಂಪನಿ ಈಗಾಗಲೇ 11 ಸಾವಿರ ಎಕರೆ ಭೂಮಿಯನ್ನು ಸರ್ಕಾರದಿಂದ ಪಡೆದುಕೊಂಡಿದೆ.ಈಗ ಮತ್ತೆ 3667 ಎಕರೆ ಭೂಮಿ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಸಂಪುಟ ಉಪಸಮಿತಿ ಈಗಾಗಲೇ ಪಡೆದುಕೊಂಡಿರುವ ಭೂಮಿಯಲ್ಲಿ ಕಂಪನಿ ಏನೆಲ್ಲ ಕೈಗಾರಿಕೆಗಳನ್ನು ಮಾಡಿದೆ ಎಂಬುದನ್ನು ಖುದ್ದು ಪರಿಶೀಲಿಸಬೇಕು.
ಕೈಗಾರಿಕಾ ಉದ್ದೇಶಕ್ಕಾಗಿ ನೀಡಿದ ಭೂಮಿಯನ್ನು ವಸತಿ ಉದ್ದೇಶಕ್ಕೆ ಬದಲಾವಣೆ ಮಾಡಿಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದೆ ಎಂಬ ಆರೋಪ ಇದೆ.
ಜಿಲ್ಲೆಯ ಜನರಿಗೆ ತುಂಗಭದ್ರಾ ನದಿ ಮೂಲಕ ನೀರು ಪೂರೈಸಲು ಕೃಷ್ಣದೇವರಾಯರ ಕಾಲದಲ್ಲಿಯೇ ಕಾಲುವೆಗಳನ್ನು ನಿರ್ಮಿಸಲಾಗಿತ್ತು. ಪ್ರಸ್ತುತ ಅಣೆಕಟ್ಟು ನಿರ್ಮಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆ ಕಡಿಮೆ ಇರುವುದರಿಂದ ವ್ಯವಸಾಯಕ್ಕೆ ನೀರು ಬಿಡುತ್ತಿಲ್ಲ. ಆದರೆ ಜಿಂದಾಲ್, ಬಿಎಂಎಲ್, ಕಲ್ಯಾಣಿ, ಕಿರ್ಲೋಸ್ಕರ್, ಸ್ಮಯರ್, ಎಸ್ಎಲ್ಆರ್, ಎಂಎಸ್ಪಿಎಲ್ ಕಂಪನಿಗಳಿಗೆ ಯಾವುದೇ ಅಡೆತಡೆ ಇಲ್ಲದೆ ನದಿಪಾತ್ರದಿಂದ ನೀರು ಬಿಡಲಾಗುತ್ತಿದೆ. ಆದರೂ ಕಾರ್ಖಾನೆಗಳು ಅಕ್ರಮವಾಗಿ ನದಿಯಿಂದ ನೀರು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಇದೆ.
ಕೆಲವು ಕಂಪನಿಗಳು ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಸರ್ಕಾರದಿಂದ ಕಡಿಮೆ ಬೆಲೆಗೆ ಭೂಮಿ ಪಡೆದು ಇಂಜಿನಿಯರ್ಗಳಿಂದ ಅದಕ್ಕೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ನಿಗದಿಪಡಿಸಿ, ಬ್ಯಾಂಕ್ಗಳಲ್ಲಿ ಅಡವಿಟ್ಟು ಸಾವಿರಾರು ಕೋಟಿ ಸಾಲ ಪಡೆದು ವಂಚಿಸಿರುವ ಉದಾಹರಣೆಗಳಿವೆ. ಇನ್ನು ಮುಂದೆ ಯಾವುದೇ ಕಂಪನಿಯು ಭೂಮಿಯನ್ನು ಸಾಲಕ್ಕಾಗಿ ಯಾವುದೇ ಬ್ಯಾಂಕಿಗೂ ಅಡಮಾನ ಮಾಡಬಾರದು ಎಂಬ ಷರತ್ತು ವಿಧಿಸಬೇಕು, ಜಿಂದಾಲ್ ಕಂಪನಿ 25ಸಾವಿರಕ್ಕಿಂತ ಹೆಚ್ಚು ಉದ್ಯೋಗಾವಕಾಶ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅಷ್ಟು ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಸರ್ಕಾರಿ ಸೇವೆಯಿಂದ ನಿವೃತ್ತರಾದ ಪ್ರಧಾನ ಕಾರ್ಯದರ್ಶಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡು ಸಾಕಷ್ಟು ವೇತನ ಹಾಗೂ ಭತ್ಯೆಗಳನ್ನು ನೀಡುತ್ತಿದೆ. ಅವರು ಸರ್ಕಾರದ ಲೋಪದೋಷಗಳನ್ನು ತಿಳಿದುಕೊಂಡು ಅಕ್ರಮದ ಕೆಲಸಗಳನ್ನೂ ಸಹ ಸಕ್ರಮ ರೀತಿಯಲ್ಲೇ ಮಾಡಿಸುತ್ತಾರೆ ಎಂದು ಆರೋಪಿಸಿದರು.
ಜಿಂದಾಲ್ ಕಾರ್ಖಾನೆಯ ಸುಮಾರು 20 ರಿಂದ 40 ಚಕ್ರದ ವಾಹನಗಳು ಬಳ್ಳಾರಿ-ಹೊಸಪೇಟೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದು, ರಸ್ತೆ ಹಾಳಾಗುತ್ತಿದೆ. ಅದನ್ನು ಪ್ರತಿವರ್ಷ ಸರ್ಕಾರ ದುರಸ್ತಿ ಪಡಿಸುವ ಅನಿವಾರ್ಯತೆ ಎದುರಾಗುತ್ತಿದೆ.ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.
ಕಾರ್ಖಾನೆಯಿಂದ ಹೊರಸೂಸುವ ವಿಷಾನಿಲದಿಂದ ಸುತ್ತಮುತ್ತಲ ವಾತಾವರಣ ಕಲುಷಿತಗೊಳ್ಳುತ್ತಿದ್ದು, ನಾಗರಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ಅಸ್ತಮಾ ಸೇರಿದಂತೆ ವಿವಿಧ ರೋಗಗಳು ಕಾಡುತ್ತಿವೆ. ಗರ್ಭಿಣಿಯರು ವಿಕಲಚೇತನ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ.ಈ ರೀತಿ ಹಲವಾರು ಸಮಸ್ಯೆಗಳು ಕಾರ್ಖಾನೆಯಿಂದಾಗುತ್ತಿದೆ. ಸಿಎಸ್ಆರ್ ನಿಧಿಯಿಂದ ಈವರೆಗೂ ಕೇವಲ 10 ಕೋಟಿ ರೂ. ಮಾತ್ರ ನೀಡಿದ್ದಾರೆ.ಜಿಲ್ಲೆಯೊಂದರಲ್ಲೇ ಸಾವಿರಾರು ಕೋಟಿ ರೂ.ವ್ಯವಹಾರ ಮಾಡುವ ಕಂಪನಿ, 11 ವರ್ಷದಿಂದ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಖರ್ಚು ಮಾಡಿರುವುದು ಕೇವಲ 10 ಕೋಟಿ ರೂ.ಮಾತ್ರ.
ಜಿಂದಾಲ್ನ ಸೋದರ ಸಂಸ್ಥೆ ಗ್ಯಾಮನ್ ಇಂಡಿಯಾ ಬಳ್ಳಾರಿ-ಹೊಸಪೇಟೆ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದ್ದು, ಅನೇಕ ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರ ತೆಗೆದುಕೊಳ್ಳುವ ತೀರ್ಮಾನ ಇಡೀ ರಾಷ್ಟ್ರಕ್ಕೆ ಮಾದರಿಯಂತಿರಲಿ ಎಂದು ಅವರು ಆಶಿಸಿದ್ದಾರೆ.