ಬೆಂಗಳೂರು,ಜು.1- ನಾನು ಕಾಂಗ್ರೆಸ್‍ನಲ್ಲೇ ಇದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಚಿಂತನೆ ಮಾಡಿಲ್ಲ ಎಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್‍ಗೌಡ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಆನಂದ್‍ಸಿಂಗ್ ರಾಜೀನಾಮೆ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸ್ವಯಂ ವಿಡಿಯೋ ಚಿತ್ರೀಕರಣ ಮಾಡಿ ಸ್ಪಷ್ಟನೆ ನೀಡಿರುವ ಪ್ರತಾಪ್‍ಗೌಡ ಪಾಟೀಲ್, ನನ್ನ ಮನೆಯಲ್ಲಿ ಪೂಜಾ ಕಾರ್ಯವೊಂದು ನಡೆಯತ್ತಿದೆ. ಹಾಗಾಗಿ ಮನೆಯಲ್ಲೇ ಇದ್ದೇನೆ. ಆನಂದ್ ಸಿಂಗ್ ರಾಜೀನಾಮೆ ವಿಷಯ ಮಾಧ್ಯಮದ ಮೂಲಕವಷ್ಟೇ ಎಂದಿದ್ದಾರೆ.
ಜಿಂದಾಲ್ ಭೂಮಿ ನೀಡುವ ವಿಷಯ ಸಂಬಂಧಪಟ್ಟಂತೆ ಆನಂದ್ ಸಿಂಗ್ ಅವರು ತುಂಬ ಬೇಸರಗೊಂಡಿದ್ದರು. ಬಹಿರಂಗ ಹೇಳಿಕೆಯನ್ನು ನೀಡಿದ್ದರು. ಹೋರಾಟವನ್ನೂ ಮಾಡಿದ್ದರು. ಒಂದು ವೇಳೆ ರಾಜೀನಾಮೆ ಕೊಟ್ಟಿದ್ದರೆ ಈ ವಿಷಯಕ್ಕೆ ಕೊಟ್ಟಿರಬಹುದು ಎಂದು ಹೇಳಿದ್ದಾರೆ.
ನಾನು ಕ್ಷೇತ್ರದಲ್ಲೇ ಇದ್ದೇನೆ. ರಾಜೀನಾಮೆ ನೀಡುವ ಯಾವ ಚಿಂತನೆಯೂ ನನಗಿಲ್ಲ ಎಂದು ಪ್ರತಾಪ್‍ಗೌಡ ಸ್ಪಷ್ಟಪಡಿಸಿದ್ದಾರೆ.