ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಹೊಂಚುಹಾಕಿ ಕುಳಿತಿರುವ ಬಿಜೆಪಿಯ ನಡೆಯಿಂದ ಮತ್ತು ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಕಾಂಗ್ರೆಸ್ ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಈಗಾಗಲೇ ರಾಜೀನಾಮೆ ಪತ್ರ ರವಾನೆ ಮಾಡಿರುವ ಆನಂದ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಕಾಂಗ್ರೆಸ್ ತೊರೆಯಲಿರುವ ಆನಂದ್ ಸಿಂಗ್ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಆಪರೇಷನ್ ಕಮಲಕ್ಕೆ ಕೈಹಾಕಿದ್ದ ಬಿಜೆಪಿಯ ಗಾಳಕ್ಕೆ ಸಿಲುಕಿದ್ದ ಶಾಸಕರಲ್ಲಿ ಆನಂದ್ ಸಿಂಗ್ ಕೂಡ ಒಬ್ಬರಾಗಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಎಲ್ಲ ಶಾಸಕರನ್ನೂ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ಗೆ ಕರೆದೊಯ್ದಿದ್ದರು.
ಈಗಲ್ಟನ್ ರೆಸಾರ್ಟ್ನಲ್ಲಿ ಕಂಪ್ಲಿ ಗಣೇಶ್ ಮತ್ತು ಹೊಸಪೇಟೆ ಶಾಸಕ ಆನಂದ್ ಸಿಂಗ್ ನಡುವೆ ಕುಡಿದ ಮತ್ತಿನಲ್ಲಿ ಭಾರೀ ಗಲಾಟೆಯಾಗಿತ್ತು. ಈ ಗಲಾಟೆಯಲ್ಲಿ ಕಂಪ್ಲಿ ಗಣೇಶ್ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಿಂಗಳುಗಳ ಕಾಲ ಕಂಪ್ಲಿ ಗಣೇಶ್ಗಾಗಿ ಹುಡುಕಾಟ ನಡೆಸಿದ್ದ ಬಿಡದಿ ಪೊಲೀಸರು ಬೇರೆ ರಾಜ್ಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ, ಈ ಪ್ರಕರಣದಲ್ಲಿ ಕಂಪ್ಲಿ ಗಣೇಶ್ಗೆ ಜಾಮೀನು ಸಿಕ್ಕಿತ್ತು.
ಜಿಂದಾಲ್ ಪ್ರಕರಣದಲ್ಲಿ ಅಸಮಾಧಾನ ಹೊಂದಿರುವ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಕೈ ಪಾಳಯಕ್ಕೆ ದೊಡ್ಡ ಆಘಾತ ಎದುರಾಗಲಿದ್ದು, ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿರುವ 7 ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಕಾಂಗ್ರೆಸ್ ನಾಯಕರಾದ ಬಿ.ಸಿ. ಪಾಟೀಲ್, ಕಂಪ್ಲಿ ಗಣೇಶ್ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಮೆರಿಕ ಪ್ರವಾಸದಲ್ಲಿರುವುದರಿಂದ ಇದೇ ಸಂದರ್ಭ ನೋಡಿಕೊಂಡು ರಾಜೀನಾಮೆ ನೀಡಿ ಆನಂದ್ ಸಿಂಗ್ ಅವರೊಂದಿಗೆ 7 ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ.
ಬಳ್ಳಾರಿಯ ಸಂಡೂರು ತಾಲೂಕಿನ ತೋರಣಗಲ್ ಪ್ರದೇಶದಲ್ಲಿ ಒಟ್ಟಾರೆ 3,666 ಎಕರೆ ಜಮೀನನ್ನು ಜಿಂದಾಲ್ ಉಕ್ಕು ಸಂಸ್ಥೆಗೆ ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಅವರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಸರಕಾರಕ್ಕೆ 2 ಸಾವಿರ ಕೋಟಿಯಷ್ಟು ಹಣ ಬಾಕಿ ಉಳಿಸಿಕೊಂಡಿರುವ ಜಿಂದಾಲ್ನಂತಹ ಸಂಸ್ಥೆಗೆ ಇಷ್ಟು ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುವ ಅವಶ್ಯಕತೆ ಏನು? ಹಾಗೆಯೇ, ಜಿಂದಾಲ್ ಸಂಸ್ಥೆ ವಿರುದ್ಧ ಅಕ್ರಮ ಗಣಿಗಾರಿಕೆಯ ಆರೋಪವೂ ಇದೆ. ಇಂಥ ಕಂಪನಿಗೆ ವಿನಾಯಿತಿ ನೀಡುವುದೇಕೆ? ಎಂದು ಕೇಳಿದ್ದರು. ಜಿಂದಾಲ್ ಕಂಪನಿಗೆ ಭೂಮಿ ನೀಡುವುದಕ್ಕೆ ಬಿಜೆಪಿ ಕೂಡ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತ್ತು. ಇದೀಗ, ಆ ಜಿಂದಾಲ್ ಪ್ರಕರಣವೇ ಮೈತ್ರಿ ಸರ್ಕಾರಕ್ಕೆ ಮುಳ್ಳಾದಂತಿದೆ.