ಬರ್ಮಿಂಗ್ಹ್ಯಾಮ್, ಜೂ.29- ವಿಶ್ವಕಪ್ ಕ್ರಿಕೆಟ್ನಲ್ಲಿ ಗೆಲುವಿನ ನಾಗಾಲೋಟದೊಂದಿಗೆ ಅಜೇಯವಾಗಿರುವ ಭಾರತ ನಾಳೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿದೆ.
ಇಂಗ್ಲೆಂಡ್ ತಂಡಕ್ಕೆ ನಾಕೌಟ್ ಪಂಚ್ ನೀಡುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ವಿರಾಟ್ ಕೊಹ್ಲಿ ಪಡೆ ತುದಿಗಾಲಲ್ಲಿ ನಿಂತಿದೆ.
ಗಾಯಾಳುಗಳ ಗಂಭೀರ ಸಮಸ್ಯೆ ಇದ್ದರೂ ಆಡಿರುವ ಎಲ್ಲ ಐದು ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿ ಈಗ ಪಾಯಿಂಟ್ ಪಟ್ಟಿಯಲ್ಲಿ 11 ಅಂಕಗಳೊಂದಿಗೆ ಎರಡನೆ ಸ್ಥಾನದಲ್ಲಿದ್ದು, ಸೆಮಿಫೈನಲ್ ಬಾಗಿಲಿಗೆ ಬಂದು ತಲುಪಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ನಾಳೆ ನಡೆಯುವ ಹಣಾಹಣಿಯಲ್ಲಿ ಆತಿಥೇಯ ಇಂಗ್ಲಿಷರ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದರೆ, ಇನ್ನೊಂದೆಡೆ ಇಂಗ್ಲೆಂಡ್ಗೆ ಗೆಲುವಿನ ಕಟ್ಟಕಡೆ ಅವಕಾಶ ಕೈ ತಪ್ಪಲಿದೆ.
ಭಾರತ ಈಗಾಗಲೇ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸಿದೆ.
ಆದರೆ, ವಿಶ್ವಕಪ್ ಗೆಲುವಿನ ನೆಚ್ಚಿನ ತಂಡವೆಂದೇ ಬಿಂಬಿಸಿಕೊಂಡಿದ್ದ ಇಂಗ್ಲೆಂಡ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಪರಾಭವಗೊಳ್ಳುವ ಮೂಲಕ ಆ ತಂಡದ ಸೆಮಿಫೈನಲ್ ಹಾದಿ ದುರ್ಗಮವಾಗಲಿದೆ.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ನಾಳೆ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ಏಷ್ಯಾ ತಂಡದ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾ ತಂಡಗಳ ಸೆಮಿಫೈನಲ್ ಆಸೆ ಕಮರಿ ಹೋಗಲಿದೆ.
ಒಟ್ಟಾರೆ ನಾಳಿನ ಪಂದ್ಯ ಇಂಗ್ಲೆಂಡ್ಗೆ ಮಹತ್ವದ್ದಾಗಿದೆ. ಭಾರತದಲ್ಲಿ ಗಾಯಾಳುಗಳ ಸಮಸ್ಯೆಯಿಂದ ಶಿಖರ್ ದವನ್ ಮತ್ತು ಭುವನೇಶ್ವರ್ ಕುಮಾರ್ ತಂಡದಿಂದ ಹೊರಗುಳಿದಿದ್ದರೂ ಟೀಮ್ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಉತ್ತಮ ಲಯ ಕಾಯ್ದುಕೊಂಡಿದೆ.
ಇಂಗ್ಲೆಂಡ್ ತಂಡದಲ್ಲೂ ಗಾಯಾಳುಗಳ ಸಮಸ್ಯೆ ಜತೆಗೆ ಹಿಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್, ಬೌಲಿಂಗ್ ವಿಫಲತೆ ಕಾಡುತ್ತಿದೆ.
ಈ ಹಿಂದಿನ ಪಂದ್ಯಗಳಲ್ಲಿ ಬ್ಲೂ ಬಾಯ್ಸ್ ಆಗಿದ್ದ ಟೀಂ ಇಂಡಿಯಾ ನಾಳೆ ಆರೆಂಜ್ ಸಮವಸ್ತ್ರದಲ್ಲಿ ಮಿಂಚಲಿದೆ.