ಪ್ಯಾರಿಸ್ ಒಪ್ಪಂದಕ್ಕೆ ಭಾರತ ಸೇರಿದಂತೆ 19 ರಾಷ್ಟ್ರಗಳ ಬೆಂಬಲ

ಒಸಾಕಾ, ಜೂ.29- ಆತಂಕಕಾರಿ ಮಟ್ಟದಲ್ಲಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ ನಿಭಾಯಿಸಲು ಅವಕಾಶ ನೀಡುವ ಮಹತ್ವದ ಪ್ಯಾರಿಸ್ ಒಪ್ಪಂದಕ್ಕೆ ಜಿ-20 ಸದಸ್ಯ ರಾಷ್ಟ್ರಗಳಲ್ಲಿ ಭಾರತ ಸೇರಿದಂತೆ 19 ದೇಶಗಳು ಮರು ಬೆಂಬಲ ಸೂಚಿಸಿವೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕ ಇದಕ್ಕೆ ತನ್ನ ಸಹಮತ ವ್ಯಕ್ತಪಡಿಸಿಲ್ಲ.

ಜಪಾನ್‍ನ ಸುಂದರಿ ನಗರಿ ಒಸಾಕಾದಲ್ಲಿ ಇಂದು ಮುಕ್ತಾಯಗೊಂಡ ಜಿ-20 ಶೃಂಗಸಭೆಯಲ್ಲಿ 19 ದೇಶಗಳು ಪ್ಯಾರಿಸ್ ಹವಾಮಾನ ಒಡಂಬಡಿಕೆ ಅನುಷ್ಠಾನಕ್ಕಾಗಿ ಮರುಬೆಂಬಲ ಸೂಚಿಸಿದವು.

ಹವಾಮಾನ ಬದಲಾವಣೆ ನಿಯಂತ್ರಣ ಕುರಿತು 2016ರಲ್ಲಿ ಜಾರಿಗೆ ಬಂದ ವಿಶ್ವಸಂಸ್ಥೆ ಪ್ರಾಯೋಜಿತ ಪ್ಯಾರಿಸ್ ಒಪ್ಪಂದವು ಹಸಿರು ಮನೆಯಿಂದ ಹೊರಹೊಮ್ಮುತ್ತಿರುವ ಅಪಾಯಕಾರಿ ಅನಿಲದ ದುಷ್ಪರಿಣಾಮ ನಿಯಂತ್ರಣ, ಹೆಚ್ಚುತ್ತಿರುವ ಭೂಮಂಡಲದ ತಾಪಮಾನ ಕಡಿಮೆ ಮಾಡಲು ಹಾಗೂ ಎಲ್ಲ ಸ್ವರೂಪದ ಮಾಲಿನ್ಯಗಳನ್ನು ತಡೆಗಟ್ಟುವ ಮುಖ್ಯ ಧ್ಯೇಯೋದ್ದೇಶಗಳನ್ನು ಒಳಗೊಂಡಿದೆ.

ಆದರೆ, ಇದಕ್ಕೆ ತನ್ನ ಕೆಲವೊಂದು ಸಲಹೆಗಳನ್ನು ನೀಡಿರುವ ಅಮೆರಿಕ ಪ್ಯಾರಿಸ್ ಒಪ್ಪಂದಕ್ಕೆ ಮರುಬೆಂಬಲ ನೀಡಲು ಹಿಂದೇಟು ಹಾಕಿದೆ.

ಮಾತುಕತೆಗೆ ಅಮೆರಿಕ-ಚೀನಾ ಸಮ್ಮತಿ: ಈ ನಡುವೆ ಇಡೀ ವಿಶ್ವದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ ಮತ್ತು ಚೀನಾ ವಾಣಿಜ್ಯ ಸಮರವನ್ನು ಕೊನೆಗೊಳಿಸಲು ಉಭಯ ದೇಶಗಳು ಜಿ-20 ಶೃಂಗಸಭೆಯಲ್ಲಿ ಸಮ್ಮತಿ ನೀಡಿವೆ.

ಉಭಯ ದೇಶಗಳ ನಡುವೆ ವಾಣಿಜ್ಯ ಮತ್ತು ವ್ಯಾಪಾರ ಸಂಬಂಧವನ್ನು ಬಲಗೊಳಿಸಲು ಮತ್ತು ಈ ವಿಚಾರದಲ್ಲಿ ಉದ್ಭವಿಸಿದ್ದ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಿ ಸೌಹಾರ್ದಯುತ ಮಾತುಕತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಸಮ್ಮತಿಸಿದ್ದು, ಜಿ-20 ಶೃಂಗಸಭೆಯಲ್ಲಿ ಆವರಿಸಿದ್ದ ವಾಣಿಜ್ಯ ಆತಂಕದ ಕಾರ್ಮೋಡ ಚದುರಿದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ