ಬೆಂಗಳೂರು, ಜೂ.29- ಹಿಂದುಳಿದ ಜಾತಿಯವರಿಗೆ ಪ್ರಸ್ತುತ ನೀಡುತ್ತಿರುವ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಿದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ನಾಯಕ ಸಮುದಾಯದವರು ಹೋರಾಟ ಮಾಡಿರುವುದಕ್ಕೆ ಮಣಿದಿರುವ ಸರ್ಕಾರ ಒಂದು ವೇಳೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಲು ಮುಂದಾದರೆ ಹೋರಾಟ ಮಾಡುತ್ತೇವೆ. ನಾಯಕ ಸಮುದಾಯದವರಿಗೆ ಮೀಸಲಾತಿ ಹೆಚ್ಚು ಮಾಡಲಿ.ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಕಡಿತವಾಗಬಾರದು ಎಂದು ಹೇಳಿದರು.
ಹಿಂದುಳಿದ ವರ್ಗಗಳಿಗೆ ಶೇ.50ರಷ್ಟು ಮೀಸಲಾತಿ ಜಾರಿಯಲ್ಲಿದ್ದು, ಅದನ್ನು ಶೇ.70ರಷ್ಟಕ್ಕೆ ಹೆಚ್ಚಿಸಿ ಒಬಿಸಿಯಲ್ಲಿರುವ ನ್ಯೂನ್ಯತೆ ಸರಿಪಡಿಸಬೇಕು. ಸರ್ಕಾರ ಈ ಎಲ್ಲ ವಿಚಾರ ಮನಗಂಡು ನ್ಯಾಯ ದೊರಕಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡ ಎಂ.ಸುರೇಶ್, ಲಾತೂರ್, ಆರ್.ರಂಗಪ್ಪ, ಎಸ್.ಮರಿಬಸವಾಚಾರ್, ಪಿ.ರಾಜ್‍ಕುಮಾರ್ ಉಪಸ್ಥಿತರಿದ್ದರು.