ಈ ನಾಡು ಕಂಡ ಅಪ್ರತಿಮ ಸಾಹಿತಿ ಮಾಸ್ತಿ-ಡಾ.ಹಂಪ ನಾಗರಾಜಯ್ಯ

ಬೆಂಗಳೂರು, ಜೂ.29- ಮಾಸ್ತಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸಂಶೋಧಕ ಡಾ.ಹಂಪ ನಾಗರಾಜಯ್ಯ ಬಣ್ಣಿಸಿದರು.

ನಗರದ ವಿದ್ಯಾಭವನದಲ್ಲಿ ಡಾ.ಮಾಸ್ತಿ ಟ್ರಸ್ಟ್ ಕೋಲಾರ ವತಿಯಿಂದ ಏರ್ಪಡಿಸಿದ್ದ 2019ರ ಮಾಸ್ತಿ ಪ್ರಶಸ್ತಿ, ಮಾಸ್ತಿ ಕಾದಂಬರಿ ಕಥಾ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಅವರು, ಈ ನಾಡು ಕಂಡ ಅಪ್ರತಿಮ ಸಾಹಿತಿ ಮಾಸ್ತಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಮಾಸ್ತಿ ಅವರಲ್ಲಿ ಅಪ್ರತಿಮವಾದ ಜ್ಞಾನ ಭಂಡಾರ ಅಡಗಿತ್ತು.ಅವರ ಬರಹಗಳು ಸಾಹಿತಿ ಸೇರಿದಂತೆ ಎಲ್ಲರಿಗೂ ಸ್ಫೂರ್ತಿ ನೀಡಿವೆ. ಹಾಗಾಗಿ ಅವರ ಚಿಂತನೆಗಳು ಇಂದಿಗೂ ಸ್ಮರಣೀಯ. ವಿವೇಕದ ಜತೆಗೆ ವಿಮರ್ಶಾ ಪ್ರಜ್ಞೆ ಹೊಂದಿದ್ದ ಮಾಸ್ತಿ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸೇವೆ ಪರಿಗಣಿಸಿ ಕೇಂದ್ರ ಸರ್ಕಾರ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಿತ್ತು.ಆದರೆ, ಬಂದ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಸಾಹಿತ್ಯ ಕ್ಷೇತ್ರಕ್ಕೆ ಅರ್ಪಿಸಿದ್ದು ಅವರ ಘನತೆಯನ್ನು ಮತ್ತಷ್ಟು ಹೆಚ್ಚಿಸಿತು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಮಾತನಾಡಿ, ಮಾಸ್ತಿ ಅವರು ಸಾಹಿತ್ಯ, ಪತ್ರಿಕೋದ್ಯಮ, ಆಡಳಿತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಾಡಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.ಇಂದು ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಪುಸ್ತಕದಿಂದ ಸಿಗುವ ಸಂತಸ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯವನ್ನು ಹೊಸ ನೆಲೆಯಲ್ಲಿ ಬೆಳೆಸಿದವರು ಮಾಸ್ತಿ ಅವರು ಎಂದು ಸಾಹಿತಿ ಮರಳುಸಿದ್ದಪ್ಪ ಅಭಿಪ್ರಾಯಪಟ್ಟರು.

20ನೆ ಶತಮಾನದ ಮೇರು ಸಾಹಿತಿಯಾಗಿದ್ದ ಮಾಸ್ತಿ ಅವರು ಆಧುನಿಕ ಸಾಹಿತ್ಯದ ಎಲ್ಲ ಪ್ರಾಕಾರಗಳನ್ನೂ ಸಾಹಿತ್ಯ ರಚಿಸಿದ್ದಾರೆ.ಸಣ್ಣ ಕಥೆಗಳು, ನಾಟಕಗಳು ಇವು ಹೆಚ್ಚು ಪ್ರಖ್ಯಾತವಾದವು.ಕನ್ನಡದ ವಿವೇಕವನ್ನು ತಿದ್ದಿ ಬೆಳೆಸಿದ ಇವರು ಜೀವನ ಮಾಸ ಪತ್ರಿಕೆ ನಡೆಸುವ ಮೂಲಕ ಸಾರ್ವಜನಿಕ ಬದುಕಿಗೆ ಮಾರ್ಗದರ್ಶಕರಾಗಿದ್ದರು ಎಂದರು.

ಡಾ.ಕೆ.ಮರುಳಸಿದ್ದಪ್ಪ, ಈಶ್ವರಚಂದ್ರಪ್ಪ, ಬೋಳುವಾರ ಮಹಮ್ಮದ್ ಕುಂಞ, ಡಾ.ಮಾಗಳ್ಳಿ ಗಣೇಶ್, ಸವಿತಾ ನಾಗಭೂಷಣ್ ಅವರಿಗೆ ಮಾಸ್ತಿ ಪ್ರಶಸ್ತಿ , ಎಂ.ಆರ್.ದತ್ತಾತ್ರಿ ಅವರಿಗೆ ಮಾಸ್ತಿ ಕಾದಂಬರಿ ಪುರಸ್ಕಾರ, ಎ.ಎನ್.ಪ್ರಸನ್ನ, ಶೇಷಾದ್ರಿ ಕಿನಾರ, ಪ್ರಕಾಶನ ಚಂದ ಪುಸ್ತಕ, ಗೀತಾಂಜಲಿ ಪಬ್ಲಿಕೇಷನ್ಸ್, ಪಾಂಚಜನ್ಯ ಪಬ್ಲಿಕೇಷನ್ಸ್‍ಗೆ ಮಾಸ್ತಿ ಕಥಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಖ್ಯಾತ ಸಾಹಿತಿ ಡಾ.ಜಿ.ಎಸ್.ಸಿದ್ದಲಿಂಗಯ್ಯ, ಮಾವಿನಕೆರೆ ರಂಗನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ