ಬೆಂಗಳೂರು,ಜೂ.29- ನಗರದ ಶೇಷಾದ್ರಿಪುರಂ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.
ಶೇಷಾದ್ರಿಪುರಂ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಓದಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ 31 ವಿದ್ಯಾರ್ಥಿಗಳು, ಎಸ್ಸೆಸ್ಸೆಲ್ಸಿಯಲ್ಲಿ ರ್ಯಾಂಕ್ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದಜೀ ಅವರು ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಮಾರ್ಗದರ್ಶನ ನೀಡಿ ಅವರ ಸಾಧನೆಯನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಶ್ರಮಿಸಿದ ಹಾಗೂ ಪ್ರಸ್ತುತ ವರ್ಷ 1.5 ಕೋಟಿ ರೂ.ಗಳನ್ನು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಉತ್ತೇಜಿಸುತ್ತಿರುವ ಶೇಷಾದ್ರಿಪುರಂ ವಿದ್ಯಾಸಂಸ್ಥೆಯನ್ನು ಅವರು ಅಭಿನಂದಿಸಿದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಡಾ.ವೂಡೇ.ಪಿ.ಕೃಷ್ಣ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ.ಎಸ್.ಹೆಂಜಾರಪ್ಪ, ಗೌರವ ಸಹಾಯಕ ಕಾರ್ಯದರ್ಶಿ ಎಂ.ಎಸ್.ನಟರಾಜ್, ಧರ್ಮದರ್ಶಿಗಳಾದ ಬಿ.ಸಿ.ಲೋಕನಾಥ್, ಜಿ.ಪರಮಶಿವಯ್ಯ, ಪ್ರಾಂಶುಪಾಲ ಜಿ.ಕೆ.ಮಂಜುನಾಥ್, ಉಪಪ್ರಾಂಶುಪಾಲ ಆರ್.ವಿ.ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಎಂ.ಆರ್.ಸಂತಾನಮ್, ಉಪಕುಲಪತಿ ಡಾ. ಎನ್.ಸುಂದರ್ರಾಜನ್, ಪ್ರೊ.ವಿದ್ಯಾಶಿವಣ್ಣವರ್, ಡಾ.ಅನುರಾಧ ರೈ, ಡಾ.ವಿ.ಆರ್.ಭಾರ್ಗವಿ, ಡಾ.ಗೀತಾ ರಾಮಾನುಜಂ ಭಾಗವಹಿಸಿದ್ದರು.