ಪೊಲೀಸರ ಕಾರ್ಯಾಚರಣೆಯಲ್ಲಿ ದುಬಾರಿ ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ಬಂಧನ

ಬೆಂಗಳೂರು,ಜೂ.29- ನಗರದ ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ದುಬಾರಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರು ಮಂದಿಯನ್ನು ಬಂಧಿಸಿ 13.16 ಲಕ್ಷ ನಗದು ಮತ್ತು ವಿವಿಧ ಬ್ಯಾಂಕ್‍ಗಳ 145 ಖಾಲಿ ಚೆಕ್‍ಗಳು, 05 ಈ -ಸ್ಟ್ಯಾಂಪ್ ಪತ್ರಗಳು, ಆಸ್ತಿಯ ಶುದ್ದ ಕ್ರಯಪತ್ರಗಳು, ಬಾಂಡ್‍ಪೇಪರ್ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ವೆಂಕಟೇಶ್(31) ಎಂಬಾತನನ್ನು ಬಂಧಿಸಿ 15600 ನಗದು, ಎರಡು ನೋಟ್‍ಬುಕ್ ಹಾಗೂ ಸಾಲ ಪಡೆದುಕೊಂಡಿರುವವರ ಹೆಸರಿನ 18 ಹಾಳೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಾಲಕ್ಷ್ಮಿಲೇಔಟ್ ಠಾಣೆ ಪೊಲೀಸರು ನಾಗರಾಜ(53) ಎಂಬುವರನ್ನು ಬಂಧಿಸಿ 51 ಸಾವಿರ ನಗದು, 19 ಖಾಲಿ ಚೆಕ್‍ಗಳು, ಎರಡು ಖಾಲಿ ಬಾಂಡ್ ಪೇಪರ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ನಂದಿನಿ ಲೇಔಟ್ ಠಾಣೆ ಪೊಲೀಸರು ಜಗದೀಶ್(32) ಎಂಬಾತನನ್ನು ಬಂಧಿಸಿ 12.50 ಲಕ್ಷ ನಗದು, ಮೂರು ಖಾಲಿ ಚೆಕ್‍ಗಳು ಹಾಗೂ 4 ಖಾಲಿ ಬಾಂಡ್‍ಪೇಪರ್‍ಗಳನ್ನು ಪಡೆದುಕೊಂಡಿದ್ದಾರೆ.

ರಾಜಗೋಪಾಲನಗರ ಪೊಲೀಸರು ಕುಮಾರ್(35)ನನ್ನು ಬಂಧಿಸಿ ವಿವಿಧ ಬ್ಯಾಂಕ್‍ಗಳ 4 ಖಾಲಿ ಚೆಕ್‍ಗಳು, 2 ಸೇಲ್ ಡೀಡ್, ದ್ವಿಚಕ್ರ ವಾಹನದ ಎರಡು ಆರ್‍ಸಿ ಪುಸ್ತಕ, 2 ಬಾಂಡ್‍ಪೇಪರ್, 2 ನೋಟ್‍ಬುಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರ್‍ಎಂಸಿಯಾರ್ಡ್ ಠಾಣೆ ಪೊಲೀಸರು ರಾಮಕೃಷ್ಣ (48)ನನ್ನು ಬಂಧಿಸಿ 2 ಖಾಲಿ ಸ್ಟಾಂಪ್ ಪೇಪರ್, ಖಾಲಿ ಚೆಕ್‍ಗಳು, ಏಳು ವಿವಿಧ ಹೆಸರುಗಳಲ್ಲಿರುವ ಖಾಲಿ ಚೆಕ್‍ಗಳು, ಹಂಗಾಮಿ ಹಕ್ಕುಪತ್ರ, ಈ-ಸ್ಟಾಂಪ್ ಪೇಪರ್, ಜಿಪಿಎ ಪತ್ರ, ನಿವೇಶನದ ಶುದ್ಧ ಕ್ರಯಪತ್ರ, ವಿವಿಧ ಹೆಸರಿನಲ್ಲಿದ್ದ ನೋಟ್‍ಬುಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಲದೇವನಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾಗ ದಿಲೀಪ್ ಪರಾರಿಯಾಗಿದ್ದು, ಈತನ ಕಚೇರಿಯಲ್ಲಿದ್ದ ವ್ಯಕ್ತಿಯೊಬ್ಬರ ಹೆಸರಿನ ಸ್ಟೇಟ್ ಬ್ಯಾಂಕ್‍ನ ಖಾಲಿ ಚೆಕ್, ನಾಲ್ಕುಚಕ್ರ ಮತ್ತು ದ್ವಿಚಕ್ರ ವಾಹನಗಳ ನಾಲ್ಕು ಅಡಮಾನ ಪತ್ರ ವಶಪಡಿಸಿಕೊಂಡಿದ್ದಾರೆ.

ಬಾಗಲಗುಂಟೆ ಠಾಣೆ ಪೊಲೀಸರು ಸುಜಾತ ಎಂಬುವರನ್ನು ಬಂಧಿಸಿ ವಿವಿಧ ಬ್ಯಾಂಕ್‍ಗಳ 14 ಖಾಲಿ ಚೆಕ್‍ಗಳು, 19 ಬಾಂಡ್‍ಪೇಪರ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ದುಬಾರಿ ಬಡ್ಡಿ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಜಮುನಾ ಎಂಬುವರು ತಲೆಮರೆಸಿಕೊಂಡರೆ, ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೆಂಕಟೇಶ್ ಎಂಬುವರು ಆರ್.ಟಿ.ನಗರ ವ್ಯಾಪ್ತಿಯಲ್ಲಿ ಜಯರಾಮ್ ಎಂಬುವರು ತಲೆಮರೆಸಿಕೊಂಡಿದ್ದಾರೆ.

ಆರ್‍ಟಿನಗರ ಠಾಣೆ ಪೊಲೀಸರು ಜಯರಾಮ್ ಎಂಬುವರ ಕಚೇರಿಯಲ್ಲಿದ್ದ 90 ಖಾಲಿ ಚೆಕ್‍ಗಳು, 25 ಪ್ರಾಮಿಸರಿ ನೋಟ್, ಪಾಸ್‍ಬುಕ್‍ಗಳು ಮತ್ತು 4 ಐಡಿ ಕಾರ್ಡ್ ಮತ್ತು ಪೋಟೋಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ