ಒಸಾಕಾ(ಜಪಾನ್), ಜೂ.29-ಪ್ರಧಾನಿ ನರೇಂದ್ರ ಮೋದಿ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಇಂಡೋನೆಷಾ ಅಧ್ಯಕ್ಷ ಜೊಕೊ ವಿಡೊಡೊ ಮತ್ತು ಬ್ರೆಜಿಲ್ ರಾಷ್ಟ್ರಾಧ್ಯಕ್ಷ ಜಾಯಿಲ್ ಬೊಲ್ಸೊನಾರೋ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆ ಕುರಿತು ಗಹನ ಸಮಾಲೋಚನೆ ನಡೆಸಿದರು.
ಇದೇ ವೇಳೆ ಪ್ರಧಾನಿ ಅವರು ಟರ್ಕಿ, ಆಸ್ಟ್ರೇಲಿಯಾ ಮತ್ತಿತರ ದೇಶಗಳ ನಾಯಕರೊಂದಿಗೆ ಪರಸ್ಪರ ಪೂರಕ ವಿಚಾರಗಳ ಕುರಿತು ಚರ್ಚಿಸಿದರು.
ಉಭಯ ದೇಶಗಳ ಅಧ್ಯಕ್ಷರ ಜೊತೆ ಮೋದಿ ವ್ಯಾಪಾರ, ವಾಣಿಜ್ಯ, ಬಂಡವಾಳ ಹೂಡಿಕೆ, ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಮೊದಲು ಇಂಡೋನೆಷ್ಯಾ ಅಧ್ಯಕ್ಷರನ್ನು ಭೇಟಿ ಮಾಡಿದ ಮೋದಿ, ಬಹು ಫಲಪ್ರದದಾಯಕ ಸಮಾಲೋಚನೆ ನಡೆಸಿದರು. ವ್ಯಾಪಾರ ಮತ್ತು ಬಂಡವಾಳ ಹೂಡಿಕೆ, ರಕ್ಷಣೆ, ಸಾಗರ ಪ್ರದೇಶಗಳಲ್ಲಿ ಭದ್ರತೆ, ಬಾಹ್ಯಾಕಾಶ ತಂತ್ರಜ್ಞಾನ ಬಗ್ಗೆ ಚರ್ಚಿಸಿದರು. ಇಂಡೋ-ಪೆಸಿಫಿಕ್ ಪ್ರಾಂತ್ಯದ ವಿದ್ಯಮಾನಗಳ ಬಗ್ಗೆ ಮೋದಿ ಮತ್ತು ಜೊಕೊ ಸಮಾಲೋಚಿಸಿದರು ಎಂದು ರವೀಶ್ ಕುಮಾರ್ ವಿವರಿಸಿದ್ದಾರೆ.
ಬಳಿಕ ಅವರು ಬ್ರೆಜಿಲ್ ನೂತನ ಅಧ್ಯಕ್ಷ ಜಾಯಿಲ್ ಬೊಲ್ಸೊನಾರೋ ಅವರನ್ನೂ ಸಹ ಭೇಟಿ ಮಾಡಿ ಎರಡೂ ದೇಶಗಳ ನಡುವಣ ಬಾಂಧ್ಯವ ಬಲವರ್ಧನೆ ಕುರಿತು ಮಹತ್ವದ ಮಾತುಕತೆ ನಡೆಸಿದರು.
ನಂತರ ಟರ್ಕಿ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳ ನಾಯಕರೊಂದಿಗೆ ಮೋದಿ ಪರಿಸರ ಹಿತಾಸಕ್ತಿಯ ಪೂರಕ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.